ಬೆಂಗಳೂರು: 2023ರ ಏಪ್ರಿಲ್‌ನಲ್ಲಿ ಆಯೋಜಿಸಿದ್ದ ಹುಲಿ ಯೋಜನೆ–50 ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ವೆಚ್ಚ ಸೇರಿದಂತೆ 3.33 ಕೋಟಿ ಬಾಕಿ ಮೊತ್ತವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಪಾವತಿಸಿಲ್ಲ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಕಾರ್ಯಕ್ರಮ ನಡೆದಾಗ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್‌ಟಿಸಿಎ ಕಾರ್ಯಕ್ರಮ. ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದರು. ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೂ ಇದ್ದರು. ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್‌ಟಿಸಿಎ ಹೇಳಿತ್ತು ಎಂದರು.
ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ ₹6.33 ಕೋಟಿ. ₹3 ಕೋಟಿ ಪಾವತಿಯಾಗಿದೆ. ರಾಡಿಸನ್ ಬ್ಲೂ ಆತಿಥ್ಯವೆಚ್ಚ ಸುಮಾರು ₹80 ಲಕ್ಷ ಸೇರಿ ₹3.33 ಕೋಟಿ ಬಾಕಿ ಬರಬೇಕಿದೆ. ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಬಾಕಿ ಹಣ ನೀಡಿಲ್ಲ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.