ADVERTISEMENT

Tiger Census | ಕರ್ನಾಟಕದಲ್ಲಿ 563 ಹುಲಿಗಳು

ರಾಷ್ಟ್ರೀಯ ಹುಲಿ ವರದಿ ಬಿಡುಗಡೆ * ಮಧ್ಯಪ್ರದೇಶಕ್ಕೆ ಮತ್ತೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 23:05 IST
Last Updated 29 ಜುಲೈ 2023, 23:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ 700ರಷ್ಟು ಹೆಚ್ಚಾಗಿದ್ದು, ಒಟ್ಟು ಹುಲಿಗಳ ಸಂಖ್ಯೆ 3,682ಕ್ಕೆ ಏರಿದೆ. 563 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ರಾಜ್ಯವು ಮತ್ತೆ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದೆ. 

ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ‘ಅಖಿಲ ಭಾರತ ಹುಲಿಗಳ ಅಂದಾಜು-2022’ ಕುರಿತ ವಿವರವಾದ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಭಾರತವು ಪ್ರಸ್ತುತ ಪ್ರಪಂಚದ ಸುಮಾರು ಶೇ 75ರಷ್ಟು ಕಾಡು ಹುಲಿಗಳನ್ನು ಹೊಂದಿದೆ. 

2018ರ ಗಣತಿಯ ಪ್ರಕಾರ, ಕರ್ನಾಟಕದಲ್ಲಿ 524 ಹುಲಿಗಳು ಇದ್ದವು. ಮೊದಲ ಸ್ಥಾನದಲ್ಲಿದ್ದ ಮಧ್ಯಪ್ರದೇಶದಲ್ಲಿ 526 ಹುಲಿಗಳು ಇದ್ದವು. ಈಗಿನ ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಅವುಗಳ ಸಂಖ್ಯೆ 785ಕ್ಕೆ ಜಿಗಿದಿದೆ. ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 2018ರಲ್ಲಿ 444 ಹುಲಿಗಳು ಇದ್ದರೆ, ಈಗ ಅವುಗಳ ಸಂಖ್ಯೆ 560ಕ್ಕೆ ಏರಿದೆ. ಸಣ್ಣ ರಾಜ್ಯ ಉತ್ತರಾಖಂಡವು ಕರ್ನಾಟಕದ ಸನಿಹಕ್ಕೆ ಬಂದಿದೆ.

ADVERTISEMENT

ಮಧ್ಯ ಭಾರತ, ಶಿವಾಲಿಕ್‌ ಬೆಟ್ಟ, ಗಂಗಾ ಬಯಲು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯ ಹೆಚ್ಚಳ ಆಗಿದೆ. ಮಧ್ಯಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರದಲ್ಲಿ ಅವುಗಳ ಸಂಖ್ಯೆ ಗಮನಾರ್ಹ ಹೆಚ್ಚಳ ಆಗಿದೆ. ಆದರೆ, ಪಶ್ಚಿಮ ಘಟ್ಟದಲ್ಲಿ ಅವುಗಳ ಸಂಖ್ಯೆ ಸ್ಥಳೀಯವಾಗಿ ಕುಸಿತ ಆಗಿದೆ. ಈ ಪ್ರದೇಶದಲ್ಲಿ ಉದ್ದೇಶಿತ ಮೇಲ್ವಿಚಾರಣೆ ಹಾಗೂ ಸಂರಕ್ಷತಾ ಪ್ರಯತ್ನಗಳು ಅಗತ್ಯ ಎಂದು ಪರಿಸರ ಸಚಿವಾಲಯ ಒತ್ತಿ ಹೇಳಿದೆ. 

ಕಾರ್ಬೆಟ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತೀ ಹೆಚ್ಚು ಹುಲಿಗಳು (260) ಇವೆ. ಎರಡನೇ ಸ್ಥಾನದಲ್ಲಿ ರಾಜ್ಯದ ಬಂಡೀಪುರ (150) ಹಾಗೂ ನಾಗರಹೊಳೆ (141) ಸಂರಕ್ಷಿತ ಪ್ರದೇಶಗಳು ಇವೆ. 

ಹುಲಿ ಯೋಜನೆಯ 50 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಮೈಸೂರಿನಲ್ಲಿ ಏಪ್ರಿಲ್‌ 9ರಂದು ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಹುಲಿ ವರದಿ–2022’ ಬಿಡುಗಡೆ ಮಾಡಿದ್ದರು. ಕ್ಯಾಮೆರಾ ಟ್ರ್ಯಾಪ್‌ ಆಧಾರದಲ್ಲಿ ದೇಶದಲ್ಲಿ ಕನಿಷ್ಠ 3,167 ಹುಲಿಗಳು ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ದತ್ತಾಂಶವನ್ನು ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಹೆಚ್ಚಿನ ವಿಶ್ಲೇಷಣೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿದೆ. ಕ್ಯಾಮರಾ ಟ್ರ್ಯಾಪ್‌ ಹಾಗೂ ಕ್ಯಾಮೆರಾ ಟ್ರ್ಯಾಪ್‌ ಆಗದ ಹುಲಿಗಳ ಇರುವಿಕೆ ಪ್ರದೇಶಗಳಿಂದ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆ ನಡೆಸಲಾಗಿದೆ. ಇದರ ಪ್ರಕಾರ, ಹುಲಿಗಳ ಸಂಖ್ಯೆಯ ಗರಿಷ್ಠ ಮಿತಿ ಅಂದಾಜು 3,925 ಹಾಗೂ ಅವುಗಳ ಸರಾಸರಿ ಸಂಖ್ಯೆ 3,682. ವಾರ್ಷಿಕ ಶೇ 6.1ರಷ್ಟು ಬೆಳವಣಿಗೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.