ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು,ಪ್ರಕರಣದ ‘ಮಾಸ್ಟರ್ ಮೈಂಡ್’ ಶ್ರೀನಿವಾಸರೆಡ್ಡಿ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ತಾಡಪತ್ರಿ ಗ್ರಾಮದ ಕೂಲಿಕಾರ್ಮಿಕ ಶ್ರೀರಾಮುಲು (36) ಎಂಬುವನನ್ನು ಸೋಮವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಬಂಧಿತರ ಸಂಖ್ಯೆ ಆರಕ್ಕೇರಿದೆ.ಬಂಧಿತರಲ್ಲಿ ಮೂವರು ರೌಡಿಶೀಟರ್‌ಗಳಾಗಿದ್ದಾರೆ. ಇಬ್ಬರು ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುವ ಶ್ರೀನಿವಾಸರೆಡ್ಡಿಎಂಬಿಎ ಪದವೀಧರ. ಈತನೇ ಪ್ರಮುಖ ಸೂತ್ರಧಾರ. ವಿಜಯನಗರ ಅರಸರು ನಿರ್ಮಿಸಿದ ಸ್ಮಾರಕಗಳ ಬಗ್ಗೆ ಅಧ್ಯಯನ ಮಾಡಿದ್ದ. ಅಲ್ಲದೆತಾಡಪತ್ರಿಯ ಐತಿಹಾಸಿಕ ಶ್ರೀ ಬುಗ್ಗ ರಾಮಲಿಂಗೇಶ್ವರ ದೇವಾಲಯದಲ್ಲಿ ಅಪಾರ ನಿಧಿ ಇದೆ ಎಂದು ಅಲ್ಲಿಯೂ ತಮ್ಮ ಕೈಚಳಕ ತೋರಿಸಿ ವಿಫಲನಾಗಿದ್ದ’ ಎಂಬುದು ಈ ಮೂಲಗಳ ಮಾಹಿತಿ.
‘ನವವೃಂದಾವನವನ್ನು ನಿಧಿ ಆಸೆಗೆ ಧ್ವಂಸಗೊಳಿಸುವ ಸಂಚನ್ನು ತಿಂಗಳ ಹಿಂದೆಯೇ ರೂಪಿಸಿದ್ದ. ಅಲ್ಲದೆ ಕ್ಷೇತ್ರಕ್ಕೆ ಎರಡು ಬಾರಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದ. ಆರೋಪಿಗಳು ಕೃತ್ಯ ನಡೆಯುವ ಎರಡು ದಿನಗಳ ಹಿಂದೆ ನದಿ ಮಾರ್ಗದ ಮೂಲಕ ಬಂದು ಸಲಕರಣೆಗಳನ್ನು ಇಟ್ಟು ಹೋಗಿದ್ದರು. ಆನೆಗೊಂದಿ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿಯ ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಇವರಚಿತ್ರಗಳು ಸೆರೆಯಾಗಿವೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಜಯತೀರ್ಥರ ಆರಾಧನೆ
ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಭಕ್ತರಿಂದಜಯತೀರ್ಥರ ಆರಾಧನೆ ಸೋಮವಾರ ನಡೆಯಿತು.
ಆರಾಧನೆ ನಿಮಿತ್ತ ಜಯತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಗಳ ಅಲಂಕಾರ, ವಸ್ತ್ರ ಅಲಂಕಾರ, ಮಹಾಮಂಗಳಾರತಿ ನಡೆಯಿತು. ಜಯತೀರ್ಥರ ಕುರಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಕ್ತರಾದ ರವೀಂದ್ರ ಕೆರೂರು, ಗುರುಪ್ರಸಾದ್ ಇಟಗಿ, ಶ್ರೀನಿಧಿ ಆಚಾರ್, ಮೋಹಿತ್, ಪವಮಾನ ಆಚಾರ್, ಭೀಮಸೇನ ಆಚಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.