ತುಮಕೂರು: ರಾಜ್ಯದ ನಕ್ಸಲ್ ಚರಿತ್ರೆಯಲ್ಲಿ ಪ್ರಮುಖವಾಗಿ ಕಾಣುವ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ನಡೆದು 14 ವರ್ಷಗಳು ಕಳೆದಿವೆ. ಆದರೆ ಈ ಪ್ರಕರಣದ 219 ಮಂದಿ ಆರೋಪಿಗಳನ್ನು ಗುರುತಿಸಲು ಪೊಲೀಸರಿಗೆ ಇನ್ನೂ ಸಾಧ್ಯವೇ ಆಗಿಲ್ಲ! ಗುರುತಿಸಿರುವ 45 ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
2005ರ ಫೆಬ್ರುವರಿ 5ರಂದು ನಕ್ಸಲ್ ನಿಗ್ರಹ ಪಡೆ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆ ಮಾಡಿತು. ಇದಕ್ಕೆ ಪ್ರತೀಕಾರವಾಗಿ ಫೆಬ್ರುವರಿ 11ರಂದು ವೆಂಕಟಮ್ಮನಹಳ್ಳಿ ಶಾಲೆಯಲ್ಲಿದ್ದ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲಿಯರು ದಾಳಿ ನಡೆಸಿದ್ದರು.
ಏಳು ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕ ಹತ್ಯೆಗೊಳಗಾಗಿದ್ದರು. ರಾತ್ರಿ ನಡೆದ ಈ ಪ್ರಕರಣ ಬೆಳಕು ಮೂಡಿದಾಗ ಹಳ್ಳಿಯನ್ನು ಕುಖ್ಯಾತಗೊಳಿಸಿತ್ತು.
ವೆಂಕಟಮ್ಮನಹಳ್ಳಿಯ ಈ ನಕ್ಸಲ್ ದಾಳಿಯಲ್ಲಿ 300 ನಕ್ಸಲರು ಭಾಗಿಯಾಗಿದ್ದರು. ಇವರಲ್ಲಿ 81 ಜನರನ್ನು ಗುರುತಿಸಲಾಗಿದೆ. 20 ಜನರನ್ನು ಬಂಧಿಸಿದರೆ, 11 ಜನ ವಿವಿಧ ಕಡೆಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಮೂವರು ಮಾಫಿ ಸಾಕ್ಷಿಗಳಾಗಿ ಪರಿವರ್ತನೆ ಆಗಿದ್ದಾರೆ. 45 ಜನರನ್ನು ಬಂಧಿಸಲು ಹಾಗೂ 219 ಜನರನ್ನು ಗುರುತಿಸಲು ಸಾಧ್ಯವಾಗಿಲ್ಲ ಎನ್ನುತ್ತವೆ ಪೊಲೀಸ್ ದಾಖಲೆಗಳು.
ಪ್ರಕರಣದ 41ನೇ ಆರೋಪಿ ವೆಂಕಟಮ್ಮನಹಳ್ಳಿಯ ಪರ್ಗಿ ರಾಜಣ್ಣ ಮತ್ತು 45ನೇ ಆರೋಪಿ ಆರ್.ಅಚ್ಚಮ್ಮನಹಳ್ಳಿ ಕೋಟೆ ಶ್ರೀನಿವಾಸ್ ಅವರನ್ನು 2018ರ ಮಾರ್ಚ್‌ನಲ್ಲಿ ಪೊಲೀಸರು ಬಂಧಿಸಿ
ದ್ದರು. 13 ವರ್ಷಗಳಿಂದ ಈ ಇಬ್ಬರು ಆಂಧ್ರಪ್ರದೇಶ ಮತ್ತು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದರು.
ಬಂಧಿತರಾದ 19 ಮಂದಿಯನ್ನು 2011ರಲ್ಲಿ ತುಮಕೂರು ಜಿಲ್ಲಾ ನ್ಯಾಯಾಲಯವು ಖುಲಾಸೆಗೊಳಿಸಿತು. ಪ್ರಕರಣ ಸಂಬಂಧ ಇತ್ತೀಚೆಗೆ ಪಾವಗಡ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತೆಲುಗು ಕವಿ ವರವರರಾವ್ 12ನೇ ಆರೋಪಿ. ಗದ್ದರ್ 11ನೇ ಆರೋಪಿಯಾಗಿದ್ದಾರೆ. ಅವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.
ತಾಲ್ಲೂಕಿನಲ್ಲಿ ನಕ್ಸಲ್ ಗುರುತುಗಳು 1960ರಿಂದ ಕಾಣಿಸುತ್ತವೆ. 210 ಗ್ರಾಮಗಳಲ್ಲಿ 81 ಗ್ರಾಮಗಳು ನಕ್ಸಲ್ ಪೀಡಿತ. ಆಂಧ್ರಪ್ರದೇಶದ ಜತೆ ಪೂರ್ಣವಾಗಿ ಗಡಿ ಹಂಚಿಕೊಂಡಿರುವ ತಿರುಮಣಿ ಹೋಬಳಿಯ 29 ಗ್ರಾಮಗಳಲ್ಲಿ 20 ನಕ್ಸಲ್ ಪೀಡಿತ.
2015ರವರೆಗಿನ ಪೊಲೀಸ್ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲಿ 71 ಮಾಜಿ ನಕ್ಸಲರು ಇದ್ದಾರೆ. ಇವರ ವಿರುದ್ಧ 114 ಪ್ರಕರಣಗಳು ದಾಖಲಾಗಿವೆ. 2013ರಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿತ್ತು. ನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ.
ಸದ್ಯ ಕಡಪ ಜೈಲಿನಲ್ಲಿರುವ ನಕ್ಸಲ್ ನಾಯಕ ಗೋಪಿ ಅಲಿಯಾಸ್ ವಂಶಿ ಅಲಿಯಾಸ್ ಹರಿತೋಟಿ ಬಿಡುಗಡೆ ಆದರೆ ಪಾವಗಡ ಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆಗಳು ತಲೆ ಎತ್ತುತ್ತವೆ ಎನ್ನುತ್ತವೆ ಪೊಲೀಸ್ ಮೂಲಗಳು.
ಭಾಗಿ ಆಗದಿದ್ದರೂ ಆರೋಪ
‘300– 400 ಜನ ನಕ್ಸಲರು ಲಾರಿಯಲ್ಲಿ ಬಂದು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಆ ರಾತ್ರಿಯಲ್ಲಿ ಎಷ್ಟು ಜನರು ಬಂದಿದ್ದರು ಎಂದು ಪೊಲೀಸರಿಗೆ ಹೇಗೆ ಗೊತ್ತಾಗುತ್ತದೆ. ಪ್ರಕರಣದಲ್ಲಿ ಭಾಗಿ ಆಗದಿದ್ದವರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ’ ಎನ್ನುವರು ಪ್ರಕರಣದಲ್ಲಿ ಖುಲಾಸೆ ಆಗಿರುವ ಮಾಜಿ ನಕ್ಸಲರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.