ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದಡಿ ನಗರದ ಕಾರ್ಪೋರೇಟರ್ ಒಬ್ಬರ ಪುತ್ರ ಯಶಸ್ ಎಂಬುವರಿಗೆ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಆರೋಪಿ ಮಹಾಲಕ್ಷ್ಮೀಪುರ ವಾರ್ಡ್ ಸದಸ್ಯ ಕೇಶವಮೂರ್ತಿ ಅವರ ಪುತ್ರ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ಬಂಧಿಸಲಾಗಿರುವ ಡ್ರಗ್ಸ್ ಪೆಡ್ಲರ್ ರೆಹಮಾನ್ ಜೊತೆಯಲ್ಲಿ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಯಶಸ್ ಮೇಲಿದೆ.
‘ಸೆಪ್ಟೆಂಬರ್ 7ರಂದು ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ನೋಟಿಸ್‌ನಲ್ಲಿ ಅಧಿಕಾರಿಗಳು ಸೂಚಿಸಿದ್ದಾರೆ.
ಮನೆಯಲ್ಲೂ ಶೋಧ: ಇತ್ತೀಚೆಗೆ ಯಶಸ್ಮನೆಗೆ ಮುಂಬೈ ಹಾಗೂ ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳ ತಂಡ ಬಂದು ಶೋಧ ನಡೆಸಿತ್ತು. ಯಶಸ್ ಆಗ ಮನೆಯಲ್ಲಿ ಇರಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ವಾಪಸು ಹೋಗಿದ್ದ ಅಧಿಕಾರಿಗಳು, ಸೆ. 2ರಂದೇ ಯಶಸ್‌ಗೆ ನೋಟಿಸ್ ಕಳುಹಿಸಿದ್ದಾರೆ.
ಪೆಡ್ಲರ್ ರೆಹಮಾನ್, ಬೆಂಗಳೂರಿನ ಯಶಸ್ ಎಂಬುವವರಿಗೆ ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಮಾರಾಟ ಮಾಡಿರುವುದಾಗಿ ಹೇಳಿದ್ದ. ಆ ಬಗ್ಗೆ ಆನ್‌ಲೈನ್ ವ್ಯವಹಾರದ ದಾಖಲೆಗಳೂ ಎನ್‌ಸಿಬಿ ಸಿಕ್ಕಿದ್ದವು ಎಂದು ಗೊತ್ತಾಗಿದೆ.
ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಸದಸ್ಯ ಕೇಶವಮೂರ್ತಿ, ‘ನನ್ನ ಪುತ್ರನಿಗೆ ಸಿನಿಮಾದವರ ಸಂಪರ್ಕವಿಲ್ಲ. ಪದವಿ ಅಪೂರ್ಣವಾಗಿರುವ ಪುತ್ರ, ಜಿಮ್ ನಡೆಸುತ್ತಿದ್ದಾನೆ. ನೋಟಿಸ್ ಅನ್ವಯವಿಚಾರಣೆ ಎದುರಿಸಲಿದ್ದಾನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.