ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ನಾಗರಿಕ ಸೌಲಭ್ಯದ (ಸಿ.ಎ) ನಿವೇಶನಗಳನ್ನು ನಿಯಮಕ್ಕೆ ಅನುಗುಣವಾಗಿ, ಪಾರದರ್ಶಕವಾಗಿ ಹಂಚಿಕೆ ಮಾಡಿದರೂ, ಶೇ 75ರಷ್ಟು ಹಂಚಿಕೆಗೆ ಬಾಕಿ ಉಳಿದಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲಾಗುತ್ತದೆ. ಸಿ.ಎ ನಿವೇಶನಗಳನ್ನು ಹರಾಜು ಹಾಕುವ ಪದ್ದತಿಯಿಲ್ಲ. ಅರ್ಜಿ ಸಲ್ಲಿಸಿದ ಅರ್ಹ ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವ ಅಕ್ರಮವೂ ನಡೆದಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಮಾಡಲಾಗುತ್ತದೆ. ಇಲಾಖಾ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ಹಿಂದೆಲ್ಲ ಸರ್ಕಾರದ ಅನುಮೋದನೆ ಪಡೆದು ನೇರವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಈಗ ಮಂಡಳಿ ಸಿಇಒ ಅಧ್ಯಕ್ಷತೆಯಲ್ಲಿನ ಉಪ ಸಮಿತಿ ಅರ್ಹತೆಯನ್ನು ಪರಿಶೀಲಿಸುತ್ತದೆ. ಸಚಿವರ ಅಧ್ಯಕ್ಷತೆಯ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಶಿಫಾರಸು ಮಾಡಿದ ನಂತರ ರಾಜ್ಯಮಟ್ಟದ ಸಮಿತಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಈ ಬಾರಿ ಒಟ್ಟು 377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದರೂ, ಕೇವಲ 43 ನಿವೇಶನಗಳನ್ನು (96.59 ಎಕರೆ) ಹಂಚಿಕೆ ಮಾಡಲಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲೂ ಇರುವ ಸಿ.ಎ ನಿವೇಶನಗಳ ಹಂಚಿಕೆಗೆ ಅರ್ಜಿ ಅಹ್ವಾನಿಸಿ ಹಂಚಿಕೆ ಮಾಡಲಾಗಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿದ್ದವು. ಶೇ 75ರಷ್ಟು ಹಂಚಿಕೆಗೆ ಬಾಕಿ ಇವೆ ಎಂದರು.
ಇದೇ ಮೊದಲ ಬಾರಿ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 24.10ರಷ್ಟು ಮೀಸಲಿಡುವ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
‘ಷೆರ್ವನ್‌ನಿಂದ ₹8300 ಕೋಟಿ ಹೂಡಿಕೆ’
ಇಂಧನ ಕ್ಷೇತ್ರದ ಸಂಶೋಧನಾ ಸಂಸ್ಥೆ ಷೆರ್ವನ್ ಬೆಂಗಳೂರಿನಲ್ಲಿ ₹8300 ಕೋಟಿ ಹೂಡಿಕೆ ಮಾಡಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಷೆರ್ವನ್ ಇಂಡಿಯಾ ಮುಖ್ಯಸ್ಥ ಅಕ್ಷಯ್ ಸಾಹ್ನಿ ಮತ್ತು ಪ್ರಧಾನ ವ್ಯವಸ್ಥಾಪಕಿ ಕೇಟ್ ಕಲಘನ್ ಜತೆಗೆ ಶುಕ್ರವಾರ ನಡೆದ ಸಭೆಯ ನಂತರ ಅವರು ಈ ಮಾಹಿತಿ ನೀಡಿದ್ದಾರೆ. ‘ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಂಪನಿಯು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮತ್ತು ನಾವೀನ್ಯತೆ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಿದೆ. 2025ರ ವೇಳೆಗೆ ಈ ಕೇಂದ್ರದಲ್ಲಿ 600 ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.