ಬೆಂಗಳೂರು: ಎಲಿವೇಟೆಡ್ ಕಾರಿಡಾರ್ ಕಾಮಗಾರಿಯನ್ನು ಜನವರಿಯಿಂದ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಕಟಿಸುತ್ತಿದ್ದಂತೆಯೇ ಯೋಜನೆಯ ಸಾಧ್ಯಾಸಾಧ್ಯತೆ, ಪರ–ವಿರೋಧದ ಚರ್ಚೆಗಳು ಮುನ್ನೆಲೆಗೆ ಬಂದಿವೆ.
‘ಯೋಜನೆಯನ್ನು ಏಕಪಕ್ಷೀಯವಾಗಿ ಅನುಷ್ಠಾನಗೊಳಿಸುವ ಮುನ್ನ ವಿಸ್ತೃತ ವರದಿ ಬಗ್ಗೆ ಜನರ ಅಭಿಪ್ರಾಯ ಪಡೆಯಬೇಕಿತ್ತು. ಇಲ್ಲಿ ಅದ್ಯಾವುದೂ ಆಗಿಲ್ಲ. ಇದರ ಪರಿಣಾಮ, ಸಾಧ್ಯಾಸಾಧ್ಯತೆಗಳ ಬಗ್ಗೆ ಇನ್ನೊಂದು ವರದಿಯನ್ನು ಯೋಜನೆಯ ಅನುಷ್ಠಾನ ಸಂಸ್ಥೆಗಳಿಗೆ ಸಲ್ಲಿಸುತ್ತೇನೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ತಜ್ಞಪ್ರೊ.ಆಶಿಶ್ ವರ್ಮ ಹೇಳಿದರು.
‘ನಗರದ ಸಾರಿಗೆ ಸಮಸ್ಯೆ ಪರಿಹರಿಸಲು ಬಯಸುವುದಾದರೆ ಬಸ್ ಕ್ಷಿಪ್ರ ಸಾರಿಗೆ (ಬಿಆರ್‌ಟಿಎಸ್) ಅಥವಾ ಮೆಟ್ರೊ ರೈಲು ವ್ಯವಸ್ಥೆಯೇ ಪರಿಹಾರ. ಮೆಟ್ರೊ ರೈಲು ಖಾಸಗಿ ವಾಹನಗಳಿಗಿಂತ ಗಂಟೆಗೆ 38 ಪಟ್ಟು ಹೆಚ್ಚು ಜನರನ್ನು ಕರೆದೊಯ್ಯುತ್ತದೆ’ ಎಂದು ತಿಳಿಸಿದರು.
‘ಯೋಜನೆಯ ದೀರ್ಘಾವಧಿ ಪ್ರಯೋಜನ ಕುರಿತು ಆಲೋಚಿಸಿದರೆ ಎಲಿವೇಟೆಡ್ ಕಾರಿಡಾರ್ ಬದಲು ಪರ್ಯಾಯ ಮಾರ್ಗ ಏನು ಎಂಬ ಬಗ್ಗೆ ಸಲಹೆ ನೀಡಿದ್ದೆವು. ಸರ್ಕಾರ ಇದನ್ನು ಪರಿಗಣಿಸಬೇಕಿತ್ತು’ ಎಂದರು ವರ್ಮ.
ವರ್ಮ ಲೆಕ್ಕಾಚಾರ: ‘ನಾಲ್ಕು ಪಥಗಳ ಎಲಿವೇಟೆಡ್ ಮಾರ್ಗದ ಕಾಮಗಾರಿಯ ಪ್ರತಿ ಕಿಲೋ ಮೀಟರ್‌ಗೆ ₹ 166 ಕೋಟಿ ವೆಚ್ಚವಾಗುತ್ತದೆ.ಭಾರತೀಯ ಹೆದ್ದಾರಿ ಸಾಮರ್ಥ್ಯ ಕೈಪಿಡಿ ಮತ್ತು ಇಂಡಿಯನ್ ರೋಡ್ ಕಾಂಗ್ರೆಸ್ ಮಾನದಂಡಗಳ ಪ್ರಕಾರ ಪ್ರತಿ ಪಥವು 1,200 ಪಿಸಿಯು (ಪ್ಯಾಸೆಂಜರ್ ಕಾರ್ ಯುನಿಟ್) ಸಾಮರ್ಥ್ಯ ಹೊಂದಿರಬೇಕು. ಅಂದರೆ, ಎರಡು ಪಥಗಳ ರಸ್ತೆಯಲ್ಲಿ ಒಂದು ಮುಖವಾಗಿ ಗಂಟೆಗೆ 3,600 ಮಂದಿ ಪ್ರಯಾಣಿಸಬಹುದು. ಈ ಲೆಕ್ಕದ ಪ್ರಕಾರ ಸರ್ಕಾರ, ಪ್ರತಿ ಗಂಟೆಗೆ ಒಂದು ದಿಕ್ಕಿನಲ್ಲಿ 22 ಜನ ಹೋಗಲು ₹1 ಕೋಟಿ ವ್ಯಯಿಸಲು ಹೊರಟಿದೆ’ ಎಂದರು.
‘ಇದೇ ಪ್ರದೇಶದಲ್ಲಿ ನಾಲ್ಕು ಪಥಗಳ ಮೆಟ್ರೊ ನಿರ್ಮಿಸುವುದಾದರೆ ಪ್ರತಿ ಕಿ.ಮೀ.ಗೆ ₹ 150 ಕೋಟಿ ವೆಚ್ಚವಾಗಲಿದೆ. ಪ್ರತಿ ಗಂಟೆಗೆ ಒಂದು ದಿಕ್ಕಿನಲ್ಲಿ ಎರಡು ಮೆಟ್ರೊ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ 1.38 ಲಕ್ಷ ಜನರಿಗೆ ಸಾರಿಗೆ ಸೌಲಭ್ಯ ಒದಗಿಸಲು ಸಾಧ್ಯವಿದೆ’ ಎಂದು ವಿಶ್ಲೇಷಿಸಿದರು.
₹ 25,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರ್ಗ ಎಷ್ಟು ವರ್ಷಗಳ ವಾಹನ ದಟ್ಟಣೆಯ ಪ್ರಮಾಣ ಹೆಚ್ಚಳವನ್ನು ದೃಷ್ಟಿಯಲ್ಲಿರಿಸಿಕೊಂಡಿದೆ? ಪರಿಸರದ ಮೇಲಾಗುವ ಪರಿಣಾಮ ಇತ್ಯಾದಿ ಬಗ್ಗೆ ಜನರ ಮನದಲ್ಲಿ ಆತಂಕ ಸೃಷ್ಟಿಯಾಗಿದೆ. ಮಾತ್ರವಲ್ಲ ಈ ಯೋಜನೆಯ ಹಿಂದಿನ ‘ಉದ್ದೇಶ’ಗಳ ಬಗೆಗೂ ತಜ್ಞರಲ್ಲಿ ಸಂದೇಹ ಎದ್ದಿದೆ.
‘ಈ ಯೋಜನೆಯಿಂದಾಗುವ ತೀವ್ರ ಪರಿಣಾಮಗಳ ಬಗ್ಗೆ ಇನ್ನೊಂದು ವರದಿಯನ್ನು ಸಿದ್ಧಪಡಿಸಿದ್ದು, ಅನುಷ್ಠಾನ ಸಂಸ್ಥೆಗಳಿಗೆ ಇದನ್ನೂ ಸಲ್ಲಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.