ಬೆಂಗಳೂರು: ದ್ವಿತೀಯ ಪಿಯು ಉತ್ತೀರ್ಣರಾದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅಗತ್ಯವಾದ ತರಬೇತಿ ನೀಡಲು ರಾಜ್ಯ ಸರ್ಕಾರ ₹12 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ನೀಟ್, ಜೆಇಇ ಮತ್ತಿತರ ಪ್ರವೇಶ ಪರೀಕ್ಷೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿ ಕಾಲೇಜು ಹಂತದಲ್ಲೇ ತರಬೇತಿ ಪಡೆಯುತ್ತಾರೆ. ಇಲ್ಲವೇ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ಸಿದ್ಧತೆ ನಡೆಸುತ್ತಾರೆ. ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ತರಬೇತಿ ದೊರಕಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷ ಕನಿಷ್ಠ 20 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕುರಿತು ಬಜೆಟ್‌ನಲ್ಲೇ ಘೋಷಣೆ ಮಾಡಿದ್ದರು ಎಂದು ಮಾಹಿತಿ ನೀಡಿದರು.
ಸರ್ಕಾರ ಹಣ ಬಿಡುಗಡೆ ಮಾಡಿದೆ. ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ ಕಾಲೇಜು ಹಂತಗಳಲ್ಲೇ ಕಿರು ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಳಂಬವಾಗಿದ್ದ 13,500 ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ, ಅತಿಥಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ 950 ಕೋಟಿ ಘೋಷಣೆ ಮಾಡಿತ್ತು. ಆದರೆ, ನೀಡಿದ ಮೊತ್ತ ಕಡಿಮೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 2023–24ರಲ್ಲಿ ₹109 ಕೋಟಿ, ಈ ಸಾಲಿನಲ್ಲಿ ₹291 ಕೋಟಿ ನೀಡಲಾಗಿದೆ. 8,311 ಕೊಠಡಿಗಳಲ್ಲಿ ನನೆಗುದಿಗೆ ಬಿದ್ದಿದ್ದ 316 ಕೊಠಡಿಗಳ ನಿರ್ಮಾಣಕ್ಕೆ ಆಯಾ ಶಾಸಕರಿಂದ ಕ್ರಿಯಾ ಯೋಜನೆ ತರಿಸಿಕೊಳ್ಳಲಾಗಿದೆ. ಮಳೆಯಿಂದ ಹಾನಿಯಾದ ಕಟ್ಟಡಗಳನ್ನು ತಕ್ಷಣ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ವರ್ಷ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಅಂಗನವಾಡಿಗಳಲ್ಲೂ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದರು.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪ್ರವೇಶ
ಶಾಲೆ ತೊರೆಯುವ ಮಕ್ಕಳ ಸಂಖ್ಯೆ ತಗ್ಗಿಸಲು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಕಾಲೇಜಿಗೆ ಮರು ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಎಸ್‌ಎಸ್‌ಎಲ್‌ಸಿಗೆ ಮರು ದಾಖಲಾಗುವ ಮಕ್ಕಳಿಗೆ ಇತರೆ ಮಕ್ಕಳಂತೆ ಸಮವಸ್ತ್ರ ಪಠ್ಯಪುಸ್ತಕ ಶೂ ಸಾಕ್ಸ್ ಮಧ್ಯಾಹ್ನದ ಬಿಸಿಯೂಟದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. ಪ್ರಸ್ತುತ ಪ್ರೌಢಶಾಲಾ ಮಕ್ಕಳ ದಾಖಲಾತಿ ಪ್ರಮಾಣ ಶೇ 95.38 ಇದೆ. 10ನೇ ತರಗತಿಯ ನಂತರ ಶೇ 79.79 ಹಾಗೂ ಉನ್ನತ ಶಿಕ್ಷಣದಲ್ಲಿ ಶೇ 56.6 ಇದೆ. ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು 8.21 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಾರೆ. ಸುಮಾರು 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಕಳೆದ ವರ್ಷದಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಿದ ಪರಿಣಾಮ ಅನುತ್ತೀರ್ಣತೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೂರೂ ಪರೀಕ್ಷೆಗಳಲ್ಲೂ ತೇರ್ಗಡೆಯಾಗದೆ ಒಂದು ವರ್ಷ ಮನೆಯಲ್ಲೇ ಉಳಿಯುವ ವಿದ್ಯಾರ್ಥಿಗಳಿಗೆ ಮರು ದಾಖಲು ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಐದು ವರ್ಷಗಳ ಖಾಲಿ ಹುದ್ದೆ ಭರ್ತಿ
ಖಾಸಗಿ ಅನುದಾನಿತ ಶಾಲೆಗಳಲ್ಲಿ 2015ರಿಂದ 20ರವರೆಗಿನ ಅವಧಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಅಗತ್ಯವಾದ ಅನುದಾನ ನೀಡಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣ ಕಡೆಗಣಿಸಿತು. ಬಹುತೇಕ ಶಾಲೆಗಳು ಕನ್ನಡ ಮಾಧ್ಯಮದ ಶಾಲೆಗಳಾಗಿದ್ದು ಸರ್ಕಾರದ ನಿರ್ಧಾರದಿಂದ ಅವುಗಳ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.