ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ವಿರೋಧಿಸಿ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಾಲಿನಲ್ಲಿ ನಡೆದ ನೀಟ್‌ನಲ್ಲಿ ಅಕ್ರಮಗಳು ನಡೆದಿವೆ ಆರೋಪಗಳು ಎದುರಾಗಿವೆ. ಈ ವಿಚಾರ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಇದೇ ಅಧಿವೇಶನದಲ್ಲಿ ನೀಟ್ ವಿರೋಧಿಸಿ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯ ಸರ್ಕಾರವೇ ಪರೀಕ್ಷೆ ನಡೆಸಲು ಸಿದ್ಧವಿದೆ. ಅದಕ್ಕೆ ಅವಕಾಶ ನೀಡಬೇಕು ಎಂಬ ಮತ್ತೊಂದು ನಿರ್ಣಯವನ್ನು ತೆಗೆದುಕೊಳ್ಳಲು ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ ಮತ್ತು ಜನಸಂಖ್ಯೆ ಆಧಾರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಮರು ವಿಂಗಡನೆ ಪ್ರಕ್ರಿಯೆಯನ್ನು ವಿರೋಧಿಸಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.