ADVERTISEMENT

ಆಸ್ತಿ ನೋಂದಣಿ: ದಂಪತಿ ಹೆಸರಿನಲ್ಲಿ ಜಂಟಿ ಖಾತಾ

ಮಹಿಳಾ ಪರ ಕಾಳಜಿ–ರಾಜ್ಯ ಸರ್ಕಾರದ ಚಿಂತನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:22 IST
Last Updated 29 ಜೂನ್ 2021, 21:22 IST
ಬಿಎಸ್‌ವೈ
ಬಿಎಸ್‌ವೈ   

ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಣಿ ಮಾಡುವಾಗ ಗಂಡ–ಹೆಂಡತಿ ಇಬ್ಬರ ಹೆಸರಿನಲ್ಲೂ ಆಸ್ತಿ ನೋಂದಾಯಿಸಿ, ಜಂಟಿ ಖಾತೆ ಮಾಡಿಕೊಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಸುಸ್ಥಿರ ಅಭಿವೃದ್ಧಿ ಗುರಿ ಕುರಿತಂತೆ ನೀತಿ ಆಯೋಗದ ಪ್ರತಿನಿಧಿಗಳು ಮಂಗಳವಾರ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಈ ಸಲಹೆ ನೀಡಿದ್ದಾರೆ. ಸಭೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ನೂತನ ಉಪಕ್ರಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ. ಜಂಟಿ ನೋಂದಣಿ ಮಾಡಿಸಿಕೊಂಡರೆ, ಅಂತಹ ಕುಟುಂಬಗಳಿಗೆ ಕೆಲವು ರಿಯಾಯ್ತಿ ನೀಡಲಾಗುವುದು ಎಂದು ಸರ್ಕಾರ ಉತ್ತೇಜನ ನೀಡಬೇಕು’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಈ ರೀತಿ ಜಂಟಿ ಖಾತೆ ಮಾಡುವ ಕ್ರಮದಿಂದ ಲಿಂಗ ಸಮಾನತೆಯ ವಿಷಯದಲ್ಲಿ ರಾಜ್ಯದ ರ‍್ಯಾಂಕಿಂಗ್‌ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಸುಸ್ಥಿರ ಅಭಿವೃದ್ಧಿಯ ಉಳಿದ ಹಲವಾರು ಗುರಿಗಳಲ್ಲಿ ರಾಜ್ಯ ಮುಂದಿದ್ದರೂ ಲಿಂಗ ಸಮಾನತೆ, ಹಸಿವು, ಕೈಗಾರಿಕಾ ಅಭಿವೃದ್ಧಿ, ಹವಾಮಾನ ಮತ್ತು ಗುಣಮಟ್ಟ ಶಿಕ್ಷಣದ ವಿಚಾರದಲ್ಲಿ ಹಿಂದುಳಿದಿದೆ.

‘ಸಾಮಾನ್ಯವಾಗಿ ಆಸ್ತಿಗಳನ್ನು ಪುರುಷರ ಹೆಸರಿನಲ್ಲೇ ನೋಂದಣಿ ಮಾಡಲಾಗುತ್ತದೆ. ಹೀಗಾಗಿ ಮಹಿಳೆಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಆಸ್ತಿ ಪತ್ರಗಳಲ್ಲಿ ಆಯಾ ಕುಟುಂಬದ ಮಹಿಳೆಯ ಹೆಸರೂ ಸೇರಿಸಿದರೆ ಕುಟುಂಬಗಳಲ್ಲಿ ಮಹಿಳೆಗೆ ಪ್ರಾಮುಖ್ಯತೆ ಮತ್ತು ರಕ್ಷಣೆ ಸಿಗುತ್ತದೆ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇವೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಅಧಿಕಾರಿ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸುಸ್ಥಿರ ಅಭಿವೃದ್ಧಿಯ ಸೂಚ್ಯಂಕದಲ್ಲಿ ಗಣನೀಯ ಅಭಿವೃದ್ಧಿ ಆಗಿದೆ. ಮುಂದೆ ಗರ್ಭಿಣಿಯರು ಮತ್ತು ಮಕ್ಕಳ ಅಪೌಷ್ಟಿಕತೆ, ಲಿಂಗ ಸಮಾನತೆ, ವಸತಿ ಶಿಕ್ಷಣದ ಕುರಿತು ಹೆಚ್ಚಿನ ಗಮನಹರಿಸಲು ಉದ್ದೇಶಿಸಲಾಗಿದೆ ಎಂದರು.

ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯದ ಅಂಕ ಮತ್ತು ಸ್ಥಾನದಲ್ಲಿ ಗಣನೀಯ ಸುಧಾರಣೆ ಆಗಿರುವ ಬಗ್ಗೆ ನೀತಿ ಆಯೋಗದ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಸುಸ್ಥಿರ ಅಭಿವೃದ್ಧಿ ಗುರಿ 2020–21 ರ ವರದಿ ಪ್ರಕಾರ 73 ಸೂಚ್ಯಂಕ ಪಡೆದು ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 16 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಕರ್ನಾಟಕ ರಾಜ್ಯ 7 ನೇ ಗುರಿ ಸಾಧಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಳಿದ ಒಂಭತ್ತು ಗುರಿಗಳ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು ಬಾಕಿ 5 ಗುರಿಗಳ ಸಾಧನೆಯಲ್ಲಿ ಕೂಡ ಉತ್ತಮ ಸಾಧನೆ ತೋರಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.