ADVERTISEMENT

ನೇಹಾ ಪ್ರಕರಣ | ರಾಜಕೀಯ ನಷ್ಟ ತುಂಬಿಸಿಕೊಳ್ಳಲು ಸಿಎಂ ಸಾಂತ್ವನದ ನಾಟಕ: ಜೋಶಿ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 7:13 IST
Last Updated 24 ಏಪ್ರಿಲ್ 2024, 7:13 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ನೇಹಾ ಕೊಲೆ ಪ್ರಕರಣದಿಂದ ರಾಜಕೀಯವಾಗಿ ಕಾಂಗ್ರೆಸ್‌ಗೆ ಆಗುತ್ತಿರುವ ನಷ್ಟ ತುಂಬಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನದ ನಾಟಕವಾಡಿದ್ದಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಬುಧವಾರ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, 'ನೇಹಾ ಕೊಲೆ ನಡೆದು ನಾಲ್ಕು-ಐದು ದಿನಗಳ ನಂತರ ಕಾಂಗ್ರೆಸ್ ಅನುಕಂಪ ತೋರುತ್ತಿದೆ. ಸಿಎಂಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ, ಪ್ರಕರಣ ನಡೆದ ದಿನವೆ ನೇರವಾಗಿ ನೇಹಾ ತಂದೆ ನಿರಂಜನಯ್ಯ ಅವರಿಗೆ ಕರೆ ಮಾಡಿ ಸಾಂತ್ವನ, ಧೈರ್ಯ ನೀಡಿರುತ್ತಿದ್ದರು. ಕೊಲೆ ಖಂಡಿಸಿ ಹಳ್ಳಿ ಹಳ್ಳಿಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮತದಾರರು ತಿರುಗಿ ಬೀಳುವ ಭಯದಿಂದ ಸಾಂತ್ವನದ ನಾಟಕವಾಡಿದ್ದಾರೆ' ಎಂದು ಟೀಕಿಸಿದರು.

'ನೇಹಾ ಮನೆಗೆ ಸಚಿವ ಸಂತೋಷ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದಾಗ, ಮುಖ್ಯಮಂತ್ರಿ‌ ದೂರವಾಣಿಯಲ್ಲಿಯಲ್ಲಿ ಮಾತನಾಡಬಹುದಿತ್ತು. ಅದು ಬಿಟ್ಟು, ಸಚಿವ ಎಚ್.ಕೆ. ಪಾಟೀಲ ಅವರನ್ನು ಕಳುಹಿಸಿ, ಫೋನ್‌ನಲ್ಲಿ ಸಾಂತ್ವನ ಹೇಳಬೇಕಿತ್ತೆ' ಎಂದು ಜೋಶಿ ಪ್ರಶ್ನಿಸಿದರು.

ADVERTISEMENT

'ನೇಹಾ ಕೊಲೆ‌ ಪ್ರಕರಣದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ಹಿಂದೂ - ಮುಸ್ಲಿಮ್ ಭೇದವಿಲ್ಲದೆ, ಯಾರಿಗೇ ಅನ್ಯಾಯವಾದರೂ ಧ್ವನಿ ಎತ್ತುತ್ತೇವೆ. ನನ್ನ ಕ್ಷೇತ್ರದಲ್ಲಿಯೇ ಮಹಿಳೆಯರಿಗೆ ಅನ್ಯಾಯವಾಗಿದೆ, ಹೀಗಿದ್ದಾಗಲೂ ನಾನು ಸುಮ್ಮನಿರಬೇಕಿತ್ತೆ? ಈ ಪ್ರಕರಣವನ್ನು ವೋಟ್ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದು ಕಾಂಗ್ರೆಸ್, ಆದರೆ ಬಿಜೆಪಿ ಮೇಲೆ ಆರೋಪಿಸುತ್ತಿದೆ' ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.