ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಮಹತ್ತರವಾದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯ. 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿ, 1991ರಿಂದ ಸಂಸತ್ ಸದಸ್ಯನಾಗಿದ್ದೆ. 32 ವರ್ಷಗಳ ಹಿಂದೆ ಈ ಮಹಾಮನೆಯನ್ನು (ಸಂಸತ್) ಪ್ರವೇಶಿಸಿದಾಗ ನಾನು ಪ್ರಧಾನಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಮತ್ತು ಸಾರ್ವಜನಿಕ ಜೀವನದಲ್ಲಿ ಇಷ್ಟು ದಿನ ಇರುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನಗೀಗ 91 ವರ್ಷ ವಯಸ್ಸಾಗಿದೆ. ನನ್ನ ಜೀವಿತಾವಧಿಯಲ್ಲಿ ನಾನು ಹೊಸ ಸಂಸತ್ ಭವನದಲ್ಲಿ ಕುಳಿತುಕೊಳ್ಳುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ ಎಂದು ದೇವೇಗೌಡ ತಿಳಿಸಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಹಾಗೂ ಹೊಸ ಮನೆ ನಿರ್ಮಾಣ, ಹೊಸ ಮನೆಗೆ ಪ್ರವೇಶಿಸುವುದು ಅತ್ಯಂತ ಮಂಗಳಕರ ಮತ್ತು ಅಪರೂಪದ ಕ್ಷಣವಾಗಿದೆ. ಅದೇ ರೀತಿ ನೂತನ ಸಂಸತ್ ಭವನ ಉದ್ಘಾಟನೆಯೂ ಒಂದು ಅಸಾಧಾರಣ ಕ್ಷಣ ಎಂದರೆ ತಪ್ಪಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶ ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಸ್ಥಾಪಿತವಾದ ರಾಷ್ಟ್ರವಾಗಿದೆ. ಇದು ಅತ್ಯ ಅಮೂಲ್ಯವಾದ ಸಾಧನೆ ಮತ್ತು ನಮ್ಮ ಪರಂಪರೆಯಾಗಿದೆ ಎಂದು ಅವರು ಕೊಂಡಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ಉದ್ಘಾಟನೆಯನ್ನು ಭಾನುವಾರ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಇದನ್ನೂ ಓದಿ... ನೀತಿ ಆಯೋಗದ ಸಭೆಗೆ ಗೈರಾದ ಸಿದ್ದರಾಮಯ್ಯ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ: ಬಿಜೆಪಿ ಟೀಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.