ADVERTISEMENT

ಸೇವಾ ಹಿರಿತನಕ್ಕಿಲ್ಲ ಡಿಜಿ ಹುದ್ದೆ; ಅಧಿಕಾರ ಹಸ್ತಾಂತರಕ್ಕೆ ಬಾರದ ಪ್ರಸಾದ್

ಸಿಎಟಿ ಮೋರೆ ಹೋಗಲು ಸಿದ್ಧತೆ?

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:15 IST
Last Updated 31 ಜನವರಿ 2020, 20:15 IST
ನಿರ್ಗಮಿತ ಡಿಜಿ ನೀಲಮಣಿ ರಾಜು ಅವರಿಂದ ನೂತನ ಡಿಜಿ ಪ್ರವೀಣ್ ಸೂದ್ ಅವರು ಬ್ಯಾಟನ್ ಸ್ವೀಕರಿಸಿದರು – ಪ್ರಜಾವಾಣಿ ಚಿತ್ರ
ನಿರ್ಗಮಿತ ಡಿಜಿ ನೀಲಮಣಿ ರಾಜು ಅವರಿಂದ ನೂತನ ಡಿಜಿ ಪ್ರವೀಣ್ ಸೂದ್ ಅವರು ಬ್ಯಾಟನ್ ಸ್ವೀಕರಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ) ನೇಮಕಾತಿಯಲ್ಲಿ ಸೇವಾ ಹಿರಿತನ ಕಡೆಗಣಿಸಿರುವ ಆರೋಪ ವ್ಯಕ್ತವಾಗಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್ ಅವರು ನೂತನ ಡಿಜಿ ಪ್ರವೀಣ್ ಸೂದ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

85ನೇ ಬ್ಯಾಚ್ ಅಧಿಕಾರಿ ಆಗಿರುವ ಎ.ಎಂ.ಪ್ರಸಾದ್ ಅವರ ಬದಲಿಗೆ 86ನೇ ಬ್ಯಾಚ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಸರ್ಕಾರ ಡಿಜಿ ಆಗಿ ನೇಮಿಸಿದೆ. ಇದರ ನಡುವೆಯೇ, ಪ್ರಸಾದ್ ಅವರನ್ನು ಗೃಹ ರಕ್ಷಕ ದಳದ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಡಿಜಿ ಹುದ್ದೆಯನ್ನೂ ತಪ್ಪಿಸಿ ವರ್ಗಾವಣೆ ಮಾಡಿರುವ ಸರ್ಕಾರದ ನಡೆಯಿಂದ ಬೇಸರಗೊಂಡಿದ್ದಾರೆ ಎನ್ನಲಾದ ಪ್ರಸಾದ್ ಅವರು‌ ಡಿಜಿ ನೇಮಕದ ಆದೇಶ ಪ್ರಶ್ನಿಸಿಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೋರೆ ಹೋಗುವ ಸಾಧ್ಯತೆ ಇರುವುದಾಗಿ ಆಪ್ತ ಮೂಲಗಳು ತಿಳಿಸಿವೆ.

ADVERTISEMENT

ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆ ಪ್ರಸಾದ್ ಅವರು ಕಾನೂನು ತಜ್ಞರನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆ ಬಗ್ಗೆ ವಿಚಾರಿಸಿರುವುದಾಗಿ ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಸಾದ್ ಅವರು ಸಂ‍ಪರ್ಕಕ್ಕೆ ಸಿಗಲಿಲ್ಲ.

22ನೇ ವಯಸ್ಸಿಗೆ ಐಪಿಎಸ್, ಈಗ ಪೊಲೀಸ್ ಮುಖ್ಯಸ್ಥ

ದೆಹಲಿ ಐಐಟಿಯಲ್ಲಿ ಬಿ.ಟೆಕ್ (ಸಿವಿಲ್ ಎಂಜಿನಿಯರ್) ಪದವಿ ಮುಗಿಯುತ್ತಿದ್ದಂತೆ ಕೇಂದ್ರ ಲೋಕಸಭಾ ಆಯೋಗದ (ಯುಪಿಎಸ್ಸಿ) ಪರೀಕ್ಷೆ ಎದುರಿಸಿ 22 ವಯಸ್ಸಿನಲ್ಲೇ ಐಪಿಎಸ್ ಹುದ್ದೆಗೇರಿದ್ದ ಪ್ರವೀಣ್ ಸೂದ್, ಇದೀಗ ರಾಜ್ಯದ ಪೊಲೀಸ್ ಮುಖ್ಯಸ್ಥ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಓಂಪ್ರಕಾಶ್ ಸೂದ್ ಅವರ ಮಗನಾದ ಪ‍್ರವೀಣ್, ಬೆಂಗಳೂರಿನ ಐಐಎಂ ಹಾಗೂ ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

86ನೇ ಬ್ಯಾಚ್ ಅಧಿಕಾರಿ ಆಗಿರುವ ಸೂದ್, ನಂಜನಗೂಡು ಉಪವಿಭಾಗದ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ್ದರು. ಬಳ್ಳಾರಿ, ರಾಯಚೂರು ಎಸ್ಪಿಯಾಗಿ, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ, ಮೈಸೂರು ಹಾಗೂ ಬೆಂಗಳೂರು ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ. ಆಡಳಿತ, ಕೆಎಸ್‌ಆರ್‌ಪಿ ಸೇರಿ ಹಲವು ವಿಭಾಗಗಳ ಎಡಿಜಿಪಿಯೂ ಆಗಿದ್ದ ಸೂದ್ ಸದ್ಯ ಸಿಐಡಿ ವಿಭಾಗದ ಡಿಜಿಪಿ ಆಗಿ ಕೆಲಸ ಮಾಡುತ್ತಿದ್ದರು. 1996ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಹಾಗೂ 2002 ಮತ್ತು 20011ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದೆ.

ವಿವಾದಕ್ಕೆ ಕಾರಣವಾಗಿದ್ದ ನೇಮಕಾತಿ

ಬೆಂಗಳೂರು: ಡಿಜಿ ಹಾಗೂ ಐಜಿಪಿ ಹುದ್ದೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಹಿಂದೆಯೂ ಸೇವಾ ಹಿರಿತನ ಕಡೆಗಣಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.

2011, ನ. 30ರಂದು ನೀಲಂ ಅಚ್ಯುತರಾವ್ ಅವರು ಡಿಜಿ ಹಾಗೂ ಐಜಿಪಿ ಹುದ್ದೆಯಿಂದ ನಿವೃತ್ತಿಯಾದ ಸಂದರ್ಭದಲ್ಲಿಎ.ಆರ್.ಇನ್ಫಂಟ್ ಅವರ ಸೇವಾ ಹಿರಿತನವನ್ನು ಬದಿಗೆ ಸರಿಸಿಶಂಕರ ಬಿದರಿ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಇದನ್ನು ಇನ್ಫಂಟ್ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಸಿಎಟಿ) ಪ್ರಶ್ನಿಸಿದ್ದರು.

ಈ ನೇಮಕವನ್ನು ಸಿಎಟಿ ರದ್ದುಮಾಡಿತ್ತು. ನಂತರ ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಿರಿತನ ಕಡೆಗಣಿಸಿದ್ದಕ್ಕೆ ಕೋರ್ಟ್‌ನಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು.

ಹುದ್ದೆ ತೊರೆಯಬೇಕಾಯಿತು:ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಡಿಜಿ ನೇಮಕ ವಿವಾದಕ್ಕೆ ಸಿಲುಕಿತ್ತು. 1998, ಅ.23ರಂದು ಅಂದಿನ ಡಿಜಿ ಮತ್ತು ಐಜಿಪಿ ಟಿ.ಶ್ರೀನಿವಾಸುಲು ಸಹ ಇದೇ ಕಾರಣಕ್ಕೆ ಹುದ್ದೆ ಕಳೆದುಕೊಂಡಿದ್ದರು. ಸಿ.ದಿನಕರನ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿ ಟಿ.ಶ್ರೀನಿವಾಸುಲು ಅವರನ್ನು ನೇಮಕ ಮಾಡಲಾಗಿತ್ತು. ಸೇವಾ ಹಿರಿತನ ಕಡೆಗಣಿಸಲಾಗಿದೆ ಎಂದು ಆರೋಪಿಸಿ ದಿನಕರನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸಹ ಈ ನೇಮಕವನ್ನು ರದ್ದುಗೊಳಿಸಿ ಆದೇಶಿಸಿತ್ತು. ನಂತರ ಶ್ರೀನಿವಾಸುಲು ಅಧಿಕಾರದಿಂದ ಕೆಳಗೆ ಇಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.