ADVERTISEMENT

ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಸಚಿವ ಶ್ರೀನಿವಾಸ ಎಚ್ಚರಿಕೆ

ಲೋಪ ಕಂಡುಬಂದರೆ ಬಿಇಒ, ಡಿಡಿಪಿಐಗಳೇ ಹೊಣೆಗಾರರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 12:54 IST
Last Updated 25 ಜೂನ್ 2019, 12:54 IST
ಎಸ್‌.ಆರ್‌. ಶ್ರೀನಿವಾಸ
ಎಸ್‌.ಆರ್‌. ಶ್ರೀನಿವಾಸ   

ಬೆಂಗಳೂರು: ಸಿಬಿಎಸ್ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಇದರಲ್ಲಿ ಲೋಪವೇನಾದರೂ ಕಂಡುಬಂದರೆ ಆಯಾ ಭಾಗದ ಬಿಇಒ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶಿಕ್ಷಣ ಸಚಿವ ಎಸ್‌.ಆರ್.ಶ್ರೀನಿವಾಸ್ ಎಚ್ಚರಿಸಿದರು.

ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಪಠ್ಯಕ್ರಮದಲ್ಲಿ ಬೋಧನೆ ಮಾಡುವ ಅನುಮತಿ ಪಡೆದು ಕೇಂದ್ರೀಯ ಪಠ್ಯಕ್ರಮದಲ್ಲಿ ಪಾಠ ಮಾಡುವ ಶಾಲೆಗಳಬಗ್ಗೆಯೂ ಮಾಹಿತಿ ಇದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಿದ್ದೇನೆ. ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದೇನೆ. ಆಗ ಇಂತಹ ಅಕ್ರಮ ನಡೆಯುತ್ತಿರುವುದು ಸಾಬೀತಾದರೆ ಕ್ರಮ ನಿಶ್ಚಿತ’ ಎಂದರು.

‘ಮುಖ್ಯಮಂತ್ರಿ ಅವರು ಈಗಾಗಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದಾರೆ. ಪ್ರಾಯೋಗಿಕವಾಗಿ ಇಂದು ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಕೆ ಆರಂಭವಾಗಿದೆ. ಇದನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದರ ಬಗ್ಗೆ ಚರ್ಚಿಸಿ ಮುಂದಿನ ವರ್ಷದಿಂದ ಇಂತಹ ಶಾಲೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕನ್ನಡ ಶಾಲೆಗಳು ಮುಚ್ಚುವ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಶಾಲೆಗಳ ಮೂಲಸೌಲಭ್ಯ ಸುಧಾರಣೆಗಾಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್‌) ಬಳಸಿಕೊಳ್ಳುವ ಚಿಂತನೆ ಇದೆ ಎಂದರು.

ಶಿಕ್ಷಕರ ವರ್ಗಾವಣೆಯಲ್ಲಿ ಕೆಲವೊಂದು ಲೋಪಗಳಿರುವ ಬಗ್ಗೆ ಕೇಳಿಬಂದಿದೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ಲೋಪದೋಷ ನಿವಾರಿಸುವ ಮತ್ತು ಅರ್ಹ ಶಿಕ್ಷಕರಿಗೆ ವರ್ಗಾವಣೆ ದೊರಕಿಸಿಕೊಡಲಾಗುವುದು. ಈಗಾಗಲೇ ವರ್ಗಾವಣೆ ಮಾರ್ಗಸೂಚಿ ನೀಡಲಾಗಿದ್ದು, ಅದರಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದರು.

ನಾನೂ ಹಳ್ಳಿಯವ: ‘ರಾಜ್ಯದ, ದೇಶದ ಪ್ರಗತಿಯ ಮೂಲವೇ ಶಿಕ್ಷಣ. ನಾನು ಸಹ ಹಳ್ಳಿಯಲ್ಲೇ ಹುಟ್ಟಿ ಬೆಳೆದವ. ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿದವ. ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದೇ ನನ್ನ ಗುರಿ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶ್ರೀನಿವಾಸ್‌ ಹೇಳಿದರು.

ಉತ್ತರ ಕರ್ನಾಟಕ– 11 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ: ಉತ್ತರ ಕರ್ನಾಟಕ ಭಾಗದಲ್ಲಿ 11 ಸಾವಿರ ಶಿಕ್ಷಕರ ನೇಮಕಾತಿಗಾಗಿ ಕಳೆದ ವರ್ಷ ಅರ್ಜಿ ಆಹ್ವಾನಿಸಲಾಗಿತ್ತು. ಅದರೆ 2 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವುದು ಸಾಧ್ಯವಾಗಿತ್ತು. ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುವುದಕ್ಕೆ ಈ ಬಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀನಿವಾಸ್‌ ಹೇಳಿದರು.

‘ಶಿಕ್ಷಕರ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ಕೆಪಿಎಸ್‌ಸಿ ಮಾದರಿಯ ಪ್ರವೇಶಪರೀಕ್ಷೆಯನ್ನು ನಡೆಸಲಾಗಿತ್ತು. ಶೇ 75ಕ್ಕಿಂತ ಅಧಿಕ ಅಂಕ ಗಳಿಸಿದವವರನ್ನಷ್ಟೇ ಪರಿಗಣಿಸಲಾಗಿತ್ತು. ಈ ಅಂಕಕ್ಕಿಂತ ಕಡಿಮೆ ಅಂಕ ಗಳಿಸಿದವರನ್ನೂ ಶಿಕ್ಷಕರನ್ನಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.