ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಬಹುತೇಕ ಖಚಿತವಾಗಿದೆ.
ರಾಜ್ಯ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸಬಹುದಾದ ಕೆಲವು ಹೆಸರುಗಳು ವರಿಷ್ಠರ ಪರಿಶೀಲನೆಯಲ್ಲಿವೆ. ಮುಖ್ಯವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಲ್ಲಿ ಒಬ್ಬರು ಅಧ್ಯಕ್ಷರಾಗುವುದು ಖಚಿತ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಮಧ್ಯೆ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿಯೂ ಕೇಳಿ ಬಂದಿದೆ.ಇತ್ತೀಚೆಗೆ ಸುಳ್ಯ ತಾಲ್ಲೂಕು ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿದಾಗಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಆಕ್ರೋಶ ಇನ್ನೂ ತಣಿದಿಲ್ಲ ಎಂದು ಮೂಲಗಳು ಹೇಳಿವೆ.
ಚುನಾವಣಾ ವರ್ಷ ಆಗಿರುವುದರಿಂದ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಅಧ್ಯಕ್ಷರ ಬದಲಾವಣೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಸಮಾವೇಶಗಳ ಮೂಲಕ ಜನರನ್ನು ಆಕರ್ಷಿಸುವಲ್ಲಿ ಬಿಜೆಪಿಗಿಂತ ಸಾಕಷ್ಟು ಮುಂದಕ್ಕೆ ಸಾಗಿದೆ. ಪಕ್ಷದ ಈಗಿನ ಸ್ಥಿತಿಯಲ್ಲೇ ಚುನಾವಣೆಯಲ್ಲಿ ಎದುರಿಸಲು ಮುಂದಾದರೆ ಕಷ್ಟವಾಗಬಹುದು. ಅಧ್ಯಕ್ಷರು ಮಾತ್ರವಲ್ಲದೆ ಸಂಘಟನೆಯೂ ಆಮೂಲಾಗ್ರವಾಗಿ ಬದಲಾಗಬೇಕು ಎಂಬ ಅಭಿಪ್ರಾಯವನ್ನೂ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ಹೈಕಮಾಂಡಿಗೆ ಬಿಟ್ಟ ವಿಚಾರ. ಬದಲಾವಣೆ ಪಕ್ಷದ ಆಂತರಿಕ ವಿಚಾರ. ಮೂರು ವರ್ಷ ಆದ ಮೇಲೆ ಬೇರೆಯವರಿಗೆ ಅವಕಾಶ ಕೊಡುವುದು ಪಕ್ಷದ ನಿಯಮ. ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ವರಿಷ್ಠರು ಇದ್ದಾರೆ. ವರಿಷ್ಠರುಯಾವ ತೀರ್ಮಾನ ತಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.