ADVERTISEMENT

ಪಶ್ಚಿಮಘಟ್ಟಕ್ಕೆ ಹೊಸ ನಿಯಮ | ಭೂ ಪರಿವರ್ತನೆಗೆ ತಡೆ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:11 IST
Last Updated 16 ಆಗಸ್ಟ್ 2024, 16:11 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

ಬೆಂಗಳೂರು: ಜೀವವೈವಿಧ್ಯ ತಾಣ ಪಶ್ಚಿಮಘಟ್ಟ ಸಂರಕ್ಷಣೆಗೆ ‘ಪ್ರಾದೇಶಿಕ ನಿಯಂತ್ರಣ ಮತ್ತು ಸಮಗ್ರ ಯೋಜನೆ’ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. 

ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ,  ‘ಪಶ್ಚಿಮಘಟ್ಟ ಉಳಿಸಲು ಹೊಸ ನಿಯಮಗಳನ್ನು ರೂಪಿಸುವ ಅಗತ್ಯವಿದ್ದು, ಅಲ್ಲಿಯವರೆಗೂ ಭೂ ಪರಿವರ್ತನೆಯ ಎಲ್ಲ ಪ್ರಸ್ತಾವಗಳನ್ನೂ ತಡೆಹಿಡಿಯಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಇದಕ್ಕೆ ಸೂಕ್ತ ಕ್ರಮವಹಿಸಿ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಹಿಮಾಚಲ ಪ್ರದೇಶದಲ್ಲಿ ಭೂಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟ ಹಾಗೂ ಪ್ರತ್ಯೇಕವಾದ ನಿಯಮ ರೂಪಿಸಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂ-ಉಪಯೋಗ ಮತ್ತು ಭೂ ಪರಿವರ್ತನೆ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ, ನಗರಾಭಿವೃದ್ಧಿ, ಪೌರಾಡಳಿತ, ನಗರ ಮತ್ತು ಗ್ರಾಮಾಂತರ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಗಳ ಸಮನ್ವಯದಲ್ಲಿ ಭೂ ಉಪಯೋಗ ಸ್ವರೂಪ ಕುರಿತಂತೆ ಹೊಸ ಪ್ರಾದೇಶಿಕ ನಿಯಂತ್ರಣ ಮತ್ತು ಸಮಗ್ರ ಯೋಜನೆ ರೂಪಿಸಬೇಕು ಎಂದಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಸಭೆಯ ಅನುಮೋದನೆ ನಂತರ ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆ ತಿಳಿಸಿದ್ದಾರೆ.

ಕರ್ನಾಟಕ, ಕೇರಳದ ಹಲವೆಡೆ, ಭೂಮಿ, ಗುಡ್ಡ ಕುಸಿತ ಪ್ರಕರಣಗಳು ಆತಂಕ ತಂದಿವೆ. ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಕಾರಣ ಎನ್ನುವುದು ದೃಢಪಟ್ಟಿದೆ. ಭೂಕುಸಿತ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕಸ್ತೂರಿ ರಂಗನ್‌ ವರದಿಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಈಚೆಗೆ ಮತ್ತೊಮ್ಮೆ ಹೊರಡಿಸಿರುವ ಅಧಿಸೂಚನೆ ಕುರಿತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.