ADVERTISEMENT

ನೂತನ ಮರಳು ನೀತಿ ಶೀಘ್ರ: ಮುರುಗೇಶ ನಿರಾಣಿ

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:48 IST
Last Updated 8 ಏಪ್ರಿಲ್ 2021, 15:48 IST
ಸಚಿವ ಮುರುಗೇಶ ನಿರಾಣಿ
ಸಚಿವ ಮುರುಗೇಶ ನಿರಾಣಿ   

ಮಂಗಳೂರು: ‘ಸರ್ಕಾರವು ನೂತನ ಮರಳು ನೀತಿಯನ್ನು ಜಾರಿಗೆ ತರಲಿದ್ದು, ಇದರಲ್ಲಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಅಧ್ಯಾಯ ಇರಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಜ್ಞರ ಜೊತೆ ಚರ್ಚೆ ನಡೆಸಿ ಕರಡು ರೂಪಿಸಲಾಗುವುದು. ಬಳಿಕ ಜನಪ್ರತಿನಿಧಿಗಳು, ಸಾರ್ವಜನಿಕರ ಸಲಹೆ–ಸೂಚನೆಗಳನ್ನು ಸ್ವೀಕರಿಸಲಾಗುವುದು. ಪರಿಸರ ಹಾಗೂ ಅಭಿವೃದ್ಧಿ ಆಯಾಮಗಳನ್ನು ಪರಿಗಣಿಸಲಾಗುವುದು. ಇದರಲ್ಲಿ ₹10 ಲಕ್ಷಕ್ಕಿಂತ ಕಡಿಮೆ ವೆಚ್ಚದ ನಿರ್ಮಾಣಗಳಿಗೆ ಟನ್‌ಗೆ ಅಂದಾಜು ₹100ರಷ್ಟು ದರದಲ್ಲಿ ಸ್ಥಳೀಯ ಮರಳು, ₹10 ಲಕ್ಷಕ್ಕಿಂತ ಮೇಲ್ಪಟ್ಟ ಕಾಮಗಾರಿಗಳಿಗೆ ನಿಗದಿತ ರಾಜಸ್ವ ವಿಧಿಸುವುದು ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಒದಗಿಸಲು ಆದ್ಯತೆ ಕಲ್ಪಿಸಲಾಗುವುದು’ ಎಂದು ಅವರು ವಿವರಿಸಿದರು.

‘ಮರಳು ಸಾಗಾಟದ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುವುದು. ತಂತ್ರಜ್ಞಾನ ಬಳಸಿಕೊಂಡು ಒಟ್ಟು ಮರಳು ಲಭ್ಯತೆ, ಸಾಗಾಟ ಹಾಗೂ ಬೇಡಿಕೆ ಬಗ್ಗೆ ಇಲಾಖೆ ಪರಿಶೀಲನೆ ನಡೆಸಲಿದೆ’ ಎಂದರು.

ADVERTISEMENT

‘ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಗಣಿಗಾರಿಕೆ ನಡೆಸುವ ವೇಳೆ ಸ್ಫೋಟ ಉಂಟಾಗಿ ಹಾನಿಯಾಗಿಲ್ಲ. ಅದು ಸ್ಫೋಟಕ ದಾಸ್ತಾನು ಹಾಗೂ ಸಾಗಾಟದಲ್ಲಿ ಅವಘಡ ನಡೆದಿದೆ. ಆದರೆ, ಘಟನೆ ಬಳಿಕ ಅಭಿವೃದ್ಧಿ ಕಾಮಗಾರಿಗಳಿಗೂ ಕಚ್ಛಾವಸ್ತುಗಳ ಕೊರತೆಯಾಗಿದೆ. ಅದಕ್ಕಾಗಿ ತಕ್ಷಣವೇ ಪರವಾನಗಿ ನೀಡಿ, ಅಧಿಕೃತ ಗಣಿಗಾರಿಕೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಸರಳೀಕೃತ ನಿಯಮಾವಳಿಯನ್ನು ರೂಪಿಸಲಾಗುವುದು. ಅಲ್ಲದೇ, ಏಕಗವಾಕ್ಷಿ ಪದ್ಧತಿ ಮೂಲಕ ಗಣಿಗಾರಿಕೆಗೆ ಪರವಾನಗಿ ನೀಡುವುದನ್ನು ನೂತನ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು’ ಎಂದರು.

ಸಮವಸ್ತ್ರ:

‘ಗಣಿಗಾರಿಕೆ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗುವುದು. ಗಣಿವ್ಯಾಪ್ತಿಯಲ್ಲಿ ಅವರಿಗೆ ಪೊಲೀಸಿಂಗ್‌ ಅಧಿಕಾರ ನೀಡುವುದು ಸಾಧ್ಯವೇ? ಎಂಬ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು’ ಎಂದರು.

ಗಣಿ ಅದಾಲತ್:

‘ರಾಜ್ಯದ ಐದು ವಿಭಾಗಗಳಲ್ಲಿ ಗಣಿ ಅದಾಲತ್‌ ನಡೆಸಲಾಗುವುದು. ಮೊದಲ ಅದಾಲತ್ ಏ.30ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಾಧ್ಯವಾದರೆ ನೂತನ ನೀತಿಯನ್ನು ಅಲ್ಲೇ ಬಿಡುಗಡೆ ಮಾಡುತ್ತೇವೆ. ಅದಾಲತ್‌ನಲ್ಲಿ ಗಣಿ ಮಾಲೀಕರು, ಸಾರ್ವಜನಿಕರು, ಪರಿಸರಪ್ರೇಮಿಗಳು ಎಲ್ಲರ ಅಹವಾಲುಗಳನ್ನೂ ಆಲಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ‘ಖನಿಜ ಭವನ’ ನಿರ್ಮಿಸುವ ಚಿಂತನೆ ಇದೆ. ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆ ಎದುರಾಗಿದ್ದು, ಕಾರಣ ಹುದ್ದೆ ಭರ್ತಿ ಶೀಘ್ರವೇ ಮಾಡಲು ಆಗುತ್ತಿಲ್ಲ’ ಎಂದರು.

ಚಿನ್ನದ ನಾಣ್ಯ:

‘ಹಟ್ಟಿ ಗಣಿಯನ್ನು ಕರ್ನಾಟಕ ರಾಜ್ಯ ಹಟ್ಟಿ ಚಿನ್ನದ ಕಂಪನಿ ಎಂದು ಮರುನಾಮಕರಣ ಮಾಡುವ ಮೂಲಕ ರಾಜ್ಯದ ಪ್ರತ್ಯೇಕ ಚಿನ್ನದ ಬ್ರಾಂಡ್‌ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಚಿನ್ನದ ಗಟ್ಟಿ ಬದಲಾಗಿ, ಶುದ್ಧ ಚಿನ್ನದ ನಾಣ್ಯವನ್ನು ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದರು.

ವಿಷನ್ 2050:

‘ವಿವಿಧ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯ ಮೂಲಕ ಮುಂದಿನ 30 ವರ್ಷಗಳಲ್ಲಿ ಗಣಿ ನಿರ್ವಹಣೆ ಹೇಗಿರಬೇಕು? ಇಲ್ಲಿ ಹೂಡಿಕೆಯನ್ನು ಹೇಗೆ ಆಕರ್ಷಿಸಬೇಕು? ಹಾಗೂ ಅಭಿವೃದ್ಧಿ, ಪರಿಸರ ರಕ್ಷಣೆ, ಪರ್ಯಾಯದ ಬಗ್ಗೆ ‘ವಿಷನ್‌ 2050’ ಅನ್ನು ಸಿದ್ಧಪಡಿಸಲಾಗುವುದು’ ಎಂದರು.

ಕೇಂದ್ರ:

‘ಗಣಿ ಮಹಾವಿದ್ಯಾಲಯವನ್ನು ಸಂಡೂರು ಅಥವಾ ಚಿತ್ರದುರ್ಗದಲ್ಲಿ ಸ್ಥಾಪಿಸುವ ಚಿಂತನೆ ಇದೆ. ಇಲ್ಲಿ ಗಣಿ ಕುರಿತ ಸಮಗ್ರ ಅಧ್ಯಯನ, ತರಬೇತಿ, ಕೋರ್ಸ್‌ಗಳು ಇರಲಿವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಜೆ.ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.