ADVERTISEMENT

ಹಿಸ್ಸಾ ಆಸ್ತಿಗೆ ಹೊಸ ಸರ್ವೆ ನಂಬರ್‌: ಮುನೀಶ್‌ ಮೌದ್ಗಿಲ್‌

ಪ್ರತಿ ವಹಿವಾಟಿಗೂ ಹೊಸ ಸರ್ವೆ ನಂಬರ್‌ * ಹಿಸ್ಸಾ ನಂಬರ್‌ ಇರೊಲ್ಲ

Published 30 ಆಗಸ್ಟ್ 2022, 19:31 IST
Last Updated 30 ಆಗಸ್ಟ್ 2022, 19:31 IST
ಮುನೀಶ್‌ ಮೌದ್ಗಿಲ್‌
ಮುನೀಶ್‌ ಮೌದ್ಗಿಲ್‌   

ಬೆಂಗಳೂರು: ಕೃಷಿ ಭೂಮಿಯಲ್ಲಿ ಒಂದು ಸರ್ವೆ ನಂಬರ್‌ನಲ್ಲಿ ಭಾಗಶಃ ಮಾರಾಟ, ದಾನ, ವಿಭಾಗ ಸೇರಿದಂತೆ ಯಾವುದಾದರೂ ಹೊಸ ವಹಿವಾಟು ನಡೆದರೆ ಅದಕ್ಕೆ ಹೊಸ ಸರ್ವೆ ನಂಬರ್‌ ನೀಡುವ ವ್ಯವಸ್ಥೆ ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ. ಅಲ್ಲದೆ, ಭೂ ಪರಿವರ್ತನೆಯಾಗಿದ್ದರೂ ಅದಕ್ಕೆ ಬೇರೆ ಸರ್ವೆ ನಂಬರ್ ದೊರೆಯಲಿದೆ.

‘ಸ್ವಯಂಚಾಲಿತ ಮೋಜಿಣಿ ವ್ಯವಸ್ಥೆ’ಯಿಂದ ಕೃಷಿ ಭೂಮಿಯ ಯಾವುದಾದರೂ ಸರ್ವೆ ನಂಬರ್‌ನ ಹಿಸ್ಸಾದಲ್ಲಿ ಮಾರಾಟ, ವಿಭಾಗವಾದರೆ ಹಿಂದಿನಂತೆ ಆ ಸರ್ವೆ ನಂಬರ್‌ನಲ್ಲಿರುವ ಹಿಸ್ಸಾದ ಕೊನೆಯ ಸಂಖ್ಯೆಯ ನಂತರದ ಹಿಸ್ಸಾ ದಾಖಲಾಗುವುದಿಲ್ಲ. ಬದಲಿಗೆ ಆ ಗ್ರಾಮದಲ್ಲಿರುವ ಕೊನೆ ಸರ್ವೆ ನಂಬರ್‌ ನಂತರದ ಹೊಸ ಸರ್ವೆ ನಂಬರ್‌ ನೀಡಲಾಗುತ್ತಿದೆ.

ಉದಾಹರಣೆಗೆ ಹಾಸನದ ಅರಕಲಗೂಡು ತಾಲ್ಲೂಕಿನ ಗ್ರಾಮದಲ್ಲಿ ಸರ್ವೆ ನಂಬರ್‌ 87ರ ಹಿಸ್ಸಾ 6ರಲ್ಲಿ ಅವರ ಕುಟುಂಬದಲ್ಲೇ ಐದು ಭಾಗವನ್ನಾಗಿ ಮಾಡಿಕೊಂಡಿದ್ದರೆ ಒಬ್ಬರಿಗೆ 87/6 ಹಾಗೇ ಉಳಿದುಕೊಳ್ಳಲಿದೆ. ಆ ಗ್ರಾಮದ ಕೊನೆಯ ಸರ್ವೆ ನಂಬರ್‌ 231 ಎಂದಿದ್ದರೆ, ನಾಲ್ವರಿಗೆ 232ರಿಂದ 235 ಎಂದು ಉಳಿದ ನಾಲ್ವರಿಗೆ ಹೊಸ ನಂಬರ್ ನೀಡಲಾಗುತ್ತದೆ. ಆರ್‌ಟಿಸಿ ಸ್ವಯಂಚಾಲಿತವಾಗಿ ರಚನೆಯಾಗಿ, ಅದರ 10ನೇ ಕಾಲಂನಲ್ಲಿ ಮೂಲ ಸರ್ವೆ ನಂಬರ್‌ (ಮದರ್‌ ಸರ್ವೆ ನಂಬರ್‌) ಕೂಡ ದಾಖಲಾಗುತ್ತದೆ.

ADVERTISEMENT

‘ಸರ್ವೆ ಇಲಾಖೆ ಆಗಸ್ಟ್‌ 16ರಿಂದ‘ಸ್ವಯಂಚಾಲಿತ ಮೋಜಿಣಿ ವ್ಯವಸ್ಥೆ’ಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿರುವುದರಿಂದ ಅದೆಲ್ಲವನ್ನೂ ನಿವಾರಣೆ ಮಾಡಿ ಸೆ.10ರಿಂದ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ’ ಎಂದು ಸರ್ವೆ ಇಲಾಖೆ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಈ ಹೊಸ ಪದ್ಧತಿ ಜಾರಿಗೆ ಬಂದ ಮೇಲೆ ಪರಿವರ್ತನೆಯಾದ ಭೂಮಿಗೆ ಹೊಸ ಸರ್ವೆ ನಂಬರ್‌ ಸಿಗಲಿದೆ. ಈ ಮೊದಲು 10 ಎಕರೆಯಲ್ಲಿ 2 ಎಕರೆ ಪರಿವರ್ತನೆಯಾಗಿದ್ದರೆ ಅದು ಎಲ್ಲೂ ದಾಖಲಾಗುತ್ತಿರಲಿಲ್ಲ. ಈಗ ಪರಿವರ್ತನೆಯಾದ 2 ಎಕರೆಗೆ ಹೊಸ ಸರ್ವೆ ನಂಬರ್, ಹೊಸ ಆರ್‌ಟಿಸಿ ಸಿಗಲಿದೆ. ಒಂದು 11ಎ ಪೋಡಿ ಸ್ಕೆಚ್‌ (ಆಕಾರ್‌ಬಂದ್‌) ‍ಪಡೆದ ನಂತರ ಮತ್ತೆ ಸರ್ವೆ ಇಲಾಖೆಗೆ ಬರಬೇಕಾಗುವುದಿಲ್ಲ. ಎಷ್ಟೇ ಮ್ಯೂಟೇಷನ್‌ ಇದ್ದರೂ ಅದು ಏಕ ಸಮಯದಲ್ಲೇ ಆಗುತ್ತದೆ. ಭೂದಾಖಲೆಗಳಲ್ಲಿ ಎಲ್ಲವೂ ಸ್ಪಷ್ಟವಾಗಿರಲು ಈ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಎಲ್ಲರಿಗೂ ಅನುಕೂಲ’ ಎಂದು ಮಾಹಿತಿ ನೀಡಿದರು.

ನಿಯಮಗಳಿಗೆ ತಿದ್ದುಪಡಿ ಆಗಿಲ್ಲ: ಆರೋಪ
‘ರೈತರ ಜಮೀನು ಪೋಡಿಯಲ್ಲಿ ನೀಡುತ್ತಿದ್ದ ಹಿಸ್ಸಾ ನಂಬರನ್ನು ಗ್ರಾಮದ ಕೊನೆ ನಂಬರ್‌ ಆಗಿ ಬದಲಾಯಿಸಲು ಸೂಚಿಸಿರುವುದು ಅವೈಜ್ಞಾನಿಕ. ಕಂದಾಯ ಕಾಯ್ದೆ ಜಾರಿಗೆ ಬಂದ ನಂತರ ಯಾವುದೇ ಹೊಸ ಸರ್ವೆ ನಂಬರ್‌ಗೆ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಬರುವ ಹಿಡುವಳಿಯನ್ನು ಪ್ರತ್ಯೇಕವಾಗಿ ಅಳತೆ ಮಾಡಿದ ನಂತರ ಕಂದಾಯ ನಿಗದಿಪಡಿಸಬೇಕು. ಈ ನಿಯಮಗಳನ್ನು ಪಾಲಿಸದೆ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

‘ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಗ್ರಾಮ ನಕಾಶೆ ಹಾಗೂ ದಿಶಾಂಕ್‌ಗಳಲ್ಲಿ ಹೊಸ ಸರ್ವೆ ನಂಬರುಗಳನ್ನು ಕಾಲ ಕಾಲಕ್ಕೆ ಗುರುತಿಸುವ ಸೌಲಭ್ಯವಿಲ್ಲ. ಕಂದಾಯ ಮತ್ತು ಕೃಷಿ ಅಧಿಕಾರಿಗಳು ಗ್ರಾಮ ನಕಾಶೆಗೆ ಅವಲಂಬಿತರಾಗಿ, ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ಸೃಷ್ಟಿಯಾಗುವ ಹೊಸ ಸರ್ವೆ ನಂಬರ್‌ಗಳಿಂದ ಗೊಂದಲ ಉಂಟಾಗುತ್ತದೆ’ ಎಂದರು.

‘ಗ್ರಾಮ ನಕ್ಷೆಯಲ್ಲಿ ಗೊಂದಲ ಸೃಷ್ಟಿ’
‘ಒಂದು ಗ್ರಾಮದಲ್ಲಿ ಒಂದು ಕಡೆಯಿಂದ ಸರ್ವೆ ನಂಬರ್‌ ಆರಂಭವಾಗುತ್ತದೆ. ಈಗ ಮಧ್ಯದಲ್ಲಿ ಸರ್ವೆ ನಂಬರ್‌ 4 ಮತ್ತು 5ರ ನಡುವೆ ನಂಬರ್‌ 251 ಬರುತ್ತದೆ. ನಮಗೆ ಹಳೆಯ ನಕಾಶೆಯಲ್ಲಿ ಇದು ಇರುವುದಿಲ್ಲ. ನಾವು ಮತ್ತೆ ಆಗಾಗ್ಗೆ ಗ್ರಾಮ ನಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿ ಬಾರಿ ಹೊಸ ಸರ್ವೆ ನಂಬರ್‌ ಸೃಷ್ಟಿಯಾದಾಗ ಗ್ರಾಮ ನಕ್ಷೆ ಬದಲಾಗುತ್ತದೆ. ಇದು ಸಾಕಷ್ಟು ರೀತಿಯ ಗೊಂದಲ ಉಂಟು ಮಾಡುತ್ತದೆ. ಹೀಗಾಗಿ ಇಂತಹ ಹೊಸ ವ್ಯವಸ್ಥೆ ಬೇಡ. ಇದನ್ನು ಪರಿಶೀಲಿಸಬೇಕು ಎಂದು ಆಯುಕ್ತರಿಗೆ ನಾವು ಮನವಿ ಮಾಡುತ್ತೇವೆ’ ಎಂದು ರಾಜ್ಯ ರೈತ ಸಂಘದ (ನಂಜುಂಡ ಸ್ವಾಮಿ ಬಣ) ಮುಖಂಡ ನಾರಾಯಣ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.