ADVERTISEMENT

ಹೊಸ ವರ್ಷದ ಸಂಭ್ರಮ: ಹೊರಜಿಲ್ಲೆಗೆ ದೌಡು, ಭರ್ತಿಯಾಗಿವೆ ಹೋಟೆಲ್, ರೆಸಾರ್ಟ್‌ಗಳು

ಮನೋಹರ್ ಎಂ.
Published 25 ಡಿಸೆಂಬರ್ 2021, 19:45 IST
Last Updated 25 ಡಿಸೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವರ್ಷಾಂತ್ಯವನ್ನು ಸಂಭ್ರಮದಿಂದ ಕಳೆಯಲು ಬೆಂಗಳೂರಿನ ಜನ ಬೇರೆ ಜಿಲ್ಲೆಗಳ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಡಿ.25ರ ಕ್ರಿಸ್‌ಮಸ್‌ನಿಂದ 2022ರ ಜನವರಿ ಮೊದಲ ವಾರದ ಅವಧಿಗೆ ಈ ಜಿಲ್ಲೆಗಳಲ್ಲಿನ ಬಹುತೇಕ ರೆಸಾರ್ಟ್‌ಗಳು, ಹೋಟೆಲ್‌ ಹಾಗೂ ಹೋಂ ಸ್ಟೇಗಳು ಈಗಾಗಲೇ ಭರ್ತಿಯಾಗಿವೆ.

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಬೆಂಗಳೂರಿಗರು ತೆರಳುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಏರಿಕೆ ಕಾರಣ ಹೋಟೆಲ್, ರೆಸಾರ್ಟ್‌ಗಳಲ್ಲಿ ದರಗಳು ತುಸು ಏರಿಕೆಯಾಗಿವೆ

ವಸತಿ ಗೃಹಗಳನ್ನು ಮುಂಗಡವಾಗಿ ಕಾಯ್ದಿರಿಸಲು ಕರೆ ಮಾಡುತ್ತಿರುವ ಪ್ರವಾಸಿಗರಿಗೆ, ‘ಈ ವಾರ ಲಭ್ಯವಿಲ್ಲ. ಜನವರಿ ಮೊದಲ ವಾರದ ನಂತರ ಬನ್ನಿ’ ಎಂಬ ರೆಸಾರ್ಟ್‌ ಮಾಲೀಕರ ಉತ್ತರ ನಿರಾಸೆ ಉಂಟುಮಾಡುತ್ತಿದೆ.

ADVERTISEMENT

‘ಪ್ರವಾಸಿಗರು ವರ್ಷಾಂತ್ಯಕ್ಕೆ ರೆಸಾರ್ಟ್‌ಗೆ ಬರಲು ನವೆಂಬರ್‌ನಲ್ಲೇ ಮುಂಗಡ ಕಾಯ್ದಿರಿಸಿದ್ದಾರೆ. ಈ ಪೈಕಿ ಬೆಂಗಳೂರಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರವಾಸಿಗರುನಿನ್ನೆಯಿಂದಲೇ ಬಂದು ತಂಗುತ್ತಿದ್ದಾರೆ’ ಎಂದು ಸಕಲೇಶಪುರ ಬಳಿ ಇರುವರೆಸಾರ್ಟ್‌ವೊಂದರ ಸಿಬ್ಬಂದಿ ಹೇಳಿದರು.

‘ಕ್ರಿಸ್‌ಮಸ್‌, ಹೊಸವರ್ಷದ ಸಂಭ್ರಮದ ಜೊತೆಗೆ ಚಳಿಗಾಲದ ವಾತಾವರಣ ಆನಂದಿಸಲು ಡಿಸೆಂಬರ್ ಕೊನೆಯ ವಾರದಲ್ಲಿ ಹೆಚ್ಚಾಗಿ ಪ್ರವಾಸ ಕೈಗೊಳ್ಳುತ್ತಾರೆ. ಡಿ.30 ಹಾಗೂ 31ಕ್ಕೆ ರೆಸಾರ್ಟ್‌ನಲ್ಲಿ ತಂಗಲು ಬೆಂಗಳೂರಿನವರು ಕರೆಗಳನ್ನು ಮಾಡುತ್ತಲೇ ಇದ್ದಾರೆ. ಕಾಯ್ದಿರಿಸಿದವರಿಗಷ್ಟೇ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತಿದೆ’ ಎಂದರು.

‘ಡಿಸೆಂಬರ್ ಮೊದಲ ವಾರದಿಂದಲೇ ಪ್ರವಾಸಿಗರು ಕೊಡಗಿನಲ್ಲಿ ಬೀಡುಬಿಟ್ಟಿದ್ದಾರೆ. ಜನವರಿ 2ರವರೆಗೆ ಇಲ್ಲಿರುವ ಬಹುತೇಕ ಹೋಂ ಸ್ಟೇಗಳು ಭರ್ತಿಯಾಗಿವೆ’ ಎಂದುಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್‌ನ (ಕೆಎಚ್‌ಎಸ್‌ಎ) ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನವೀನ್ ಪೂಣಚ್ಚ ಮಾಹಿತಿ ನೀಡಿದರು.

‘ಸಂಘದ ವ್ಯಾಪ್ತಿಯಲ್ಲಿರುವ 188 ಹೋಂ ಸ್ಟೇಗಳೂ ಭರ್ತಿಯಾಗಿವೆ. ಒಂದು ತಿಂಗಳ ಹಿಂದೆಯೇ ಆನ್‌ಲೈನ್ ಮೂಲಕ ಕಾಯ್ದಿರಿಸಿದ್ದಾರೆ. ಇದರಲ್ಲಿ ಬೆಂಗಳೂರಿನವರೇ ಹೆಚ್ಚು’ ಎಂದು ತಿಳಿಸಿದರು.

ಕೆಮ್ಮಣ್ಣುಗುಂಡಿ ಜ.6ರವರೆಗೆ ಭರ್ತಿ
‘ಇತ್ತೀಚಿನ ವರ್ಷಗಳಲ್ಲಿನಂದಿ ಬೆಟ್ಟದಲ್ಲಿಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲಾಡಳಿತವೇ ಈ ಕ್ರಮ ಕೈಗೊಂಡಿದ್ದು, ಈ ಬಾರಿಯೂ ಪ್ರವೇಶ ನಿರ್ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿಯಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿರುವ 19 ವಸತಿಗೃಹಗಳೂ ಜನವರಿ 6ರವರೆಗೆ ಭರ್ತಿಯಾಗಿವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಸತಿ ಗೃಹ ವಾಸ್ತವ್ಯ ದರ ಏರಿಕೆ ಇಲ್ಲ
‘ವರ್ಷದ ಬೇರೆ ಅವಧಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಪ್ರವಾಸ ಕೈಗೊಳ್ಳುವುದು ಅಧಿಕ. ಹೊಸವರ್ಷ ಸಂಭ್ರಮಿಸಲು ಜನ ಬೆಂಗಳೂರು ಬಿಟ್ಟು ಹೊರಬರುತ್ತಾರೆ. ಮಂತ್ರಾಲಯ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಸೇರಿದಂತೆರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳು ಭರ್ತಿಯಾಗಿವೆ. ಕೆಲವು ರೆಸಾರ್ಟ್‌ಗಳಲ್ಲಿ ಮಾಲೀಕರು ವಿಶೇಷ ರಿಯಾಯಿತಿ ನೀಡುತ್ತಿದ್ದಾರೆ. ಆದರೆ, ದರ ಏರಿಕೆ ಮಾಡಿಲ್ಲ’ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.