ADVERTISEMENT

ಹೊಸ ವರ್ಷಾಚರಣೆ: ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಗೃಹ ಸಚಿವರಿಂದ ಹಿರಿಯ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 16:27 IST
Last Updated 22 ಡಿಸೆಂಬರ್ 2023, 16:27 IST
<div class="paragraphs"><p>ಹೊಸ ವರ್ಷಾಚರಣೆ</p></div>

ಹೊಸ ವರ್ಷಾಚರಣೆ

   

ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಎಲ್ಲ ನಗರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಜಿ. ಪರಮೇಶ್ವರ ಅವರು ಪೊಲೀಸ್‌ ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ.

ಕ್ರಿಸ್ಮಸ್‌ ಮತ್ತು ಹೊಸ ವರ್ಷ ಆಚರಣೆ ಸಂಬಂಧ ಪೊಲೀಸ್‌, ಆರೋಗ್ಯ, ಅಬಕಾರಿ ಇಲಾಖೆಗಳು ಹಾಗೂ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಎಂಟಿಸಿ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. 

ADVERTISEMENT

ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಮತ್ತು ಶಾಪಿಂಗ್‌ ಮಾಲ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಹೊಸ ವರ್ಷ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ. ಇಲ್ಲಿ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಬೇಕು. ರಾಜ್ಯದ ಪ್ರಮುಖ ನಗರಗಳಲ್ಲಿಯೂ ಸಹ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಎನ್‌ಐಎ ಅಧಿಕಾರಿಗಳು ಕಳೆದೊಂದು ತಿಂಗಳಿಂದ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ದಾಳಿ ನಡೆಸಿ, ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಹೊರಗಡೆಯಿಂದ ಬರುವವರ ಚಲನವಲನಗಳ ಮೇಲೂ ಸೂಕ್ತ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ನಗರಗಳಲ್ಲಿ ಹೊಸ ವರ್ಷ ಆಚರಿಸಲು ಜನ ಸೇರುವ ಪ್ರಮುಖ ಸ್ಥಳಗಳನ್ನು ಗುರುತಿಸಿ, ಪೊಲೀಸ್‌ ಅಧಿಕಾರಿಗಳು ಪರಿಶೀಲಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಬೇಕು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಬಿಬಿಎಂಪಿಯವರು ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ನಗರದ ಎಲ್ಲ ವಿಭಾಗದ ಡಿಸಿಪಿಗಳು ಸ್ಥಳೀಯ ಆಸ್ಪತ್ರೆಗಳಿಗೆ ಭೇಡಿ ನೀಡಿ, ಡಿ.31 ರ ತಡ ರಾತ್ರಿ ತುರ್ತುಚಿಕಿತ್ಸೆಗೆ ಸಿದ್ಧರಾಗಿರುವಂತೆಯೂ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ ತಿಳಿಸಿದರು.

ಹೊಸ ವರ್ಷಾಚರಣೆ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಕಡೆಗಳಲ್ಲಿ ವಿದ್ಯುತ್‌ ದೀಪ ಅಲಂಕಾರ ಮಾಡಲಾಗುತ್ತದೆ. ಒಂದು ವೇಳೆ ಇಲ್ಲಿ ಬೆಂಕಿ ಅವಘಡ ಸಂಭವಿಸಿದರೆ ತಕ್ಷಣವೇ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸನ್ನದ್ಧತೆಯಿಂದ ಇರಬೇಕು. ಅಲ್ಲದೇ, ಪಬ್‌ ಮತ್ತು ಬಾರ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಮುಂಚಿತವಾಗಿಯೇ ಪರಿಶೀಲಿಸಬೇಕು. ಮೇಲ್ಛಾವಣಿಗಳಲ್ಲಿ ಕಿಚನ್‌ ತೆರೆಯಲು ಅವಕಾಶ ನೀಡಬಾರದು. ಮದ್ಯದಂಗಡಿಗಳು ಎಂದಿನಂತೆಯೇ ತೆರೆದಿರಬೇಕು. ಹೆಚ್ಚಿನ ಸಮಯಾವಕಾಶ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಹೊಸ ವರ್ಷ ಆಚರಣೆಗೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಪೊಲೀಸ್‌ ಹೆಲ್ಪ್‌ ಡೆಸ್ಕ್‌ ತೆರೆಯಬೇಕು. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮೆಟ್ರೊ ರೈಲುಗಳು ಹೆಚ್ಚಿನ ಅವಧಿಯವರೆಗೆ ಸಂಚರಿಸಲು ವ್ಯವಸ್ಥೆ ಮಾಡಬೇಕು. ಬಿಎಂಟಿಸಿಯಿಂದ ರಾತ್ರಿ ವೇಳೆ ಜನರ ಓಡಾಟಕ್ಕೆ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು. ಖಾಸಗಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆಯೂ ಸೂಚನೆ ನೀಡಿದರು.

ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಆರ್‌. ಉಮಾಶಂಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್‌, ನಗರ ಪೊಲೀಸ್‌ ಆಯುಕ್ತ ದಯಾನಂದ್‌, ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ ಪಂತ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.