ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಇಂದು (ಶುಕ್ರವಾರ) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸೆ. 28ರ ರಾತ್ರಿಯಿಂದ ಸೆ. 29ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಬಹುತೇಕ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಶುಕ್ರವಾರದ ಬಂದ್ ಬೆಂಬಲಿಸಿದ್ದಾರೆ. ಹೀಗಾಗಿ, ಅವರೆಲ್ಲರೂ ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಲಿದ್ದಾರೆ.
ಖಾಸಗಿ ವಾಹನಗಳು, ಆಟೊ, ಮ್ಯಾಕ್ಸಿಕ್ಯಾಬ್, ಓಲಾ–ಉಬರ್ ಕ್ಯಾಬ್, ಶಾಲೆ ವಾಹನಗಳ ಚಾಲಕರು ಹಾಗೂ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಟೊ ಹಾಗೂ ಖಾಸಗಿ ವಾಹನಗಳ ಓಡಾಟ ಬಂದ್ ಆಗುವ ಸಂಭವವಿದೆ.
‘ವಾರದಲ್ಲಿ ಇದು ಎರಡನೇ ಬಂದ್. ಹೋಟೆಲ್ ನಂಬಿಕೊಂಡವರಿಗೆ ಒಂದನೇ ಬಂದ್‌ನಿಂದ ನಷ್ಟವಾಗಿದೆ. ಎರಡನೇ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ನೀಡಿದರೆ ಹೋಟೆಲ್ ತೆರೆಯುತ್ತೇವೆ’ ಎಂದು ರಾಜ್ಯ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಅವರನ್ನು ಕರೆತರುವ ವಾಹನಗಳ ಓಡಾಟವಿಲ್ಲ. ಅಂಗಡಿಗಳನ್ನು ಮುಚ್ಚಲಾಗಿದೆ.
‘ಬಂದ್ ಭದ್ರತೆಗಾಗಿ ರಾಜ್ಯದಾದ್ಯಂತ 70 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕಾವೇರಿ ನದಿ ಕೊಳ್ಳದ ಜಿಲ್ಲೆಗಳಲ್ಲಿ ಭದ್ರತೆಗೆ ಒತ್ತು ನೀಡಲಾಗಿದೆ. ಆಯಾ ಜಿಲ್ಲೆಗಳ ಎಸ್ಪಿಗಳಿಗೆ ಭದ್ರತೆ ಜವಾಬ್ದಾರಿ ವಹಿಸಲಾಗಿದೆ’ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದ್ದಾರೆ.
‘ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿಷೇಧಾಜ್ಞೆ ಜಾರಿ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ
ಕೈಗೊಳ್ಳಲಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಹಾಗೂ ಸಾರ್ವಜನಿಕರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿದರೆ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲು ಎಂದಿನಂತೆ ಸಂಚಾರ ನಡೆಸುತ್ತಿದೆ. ಉಳಿದಂತೆ ರಾಜ್ಯದಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ.
ಚಾಮರಾಜನಗರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆ 6 ಗಂಟೆಯಿಂದಲೇ ಕಾವೇರಿ ಹೋರಾಟ ಕ್ರಿಯಾ ಸಮಿತಿಯವರು ಪ್ರತಿಭಟನೆ ಆರಂಭಿಸಿದ್ದು, ಜಿಲ್ಲಾ ಕೇಂದ್ರದಲ್ಲಿ ಅಲ್ಲಲ್ಲಿ ರಸ್ತೆ ತಡೆ ಮಾಡುತ್ತಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ, ಇಂದು ರಾಜ್ಯದಾದ್ಯಂತ ಕರೆ ಕೊಟ್ಟಿರುವ ಬಂದ್‌ಗೆ ರಾಮನಗರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಅಂಗಡಿ–ಮುಂಗಟ್ಟುಗಳು ಮುಚ್ಚಿವೆ. ಸರ್ಕಾರಿ ಬಸ್ ಮತ್ತು ಖಾಸಗಿ ವಾಹನಗಳ ಓಡಾಟವೂ ಕಡಿಮೆಯಾಗಿದೆ.
ಕರ್ನಾಟಕ ಬಂದ್‌ಗೆ ವಿಜಯನಗರ ಜಿಲ್ಲೆಯಲ್ಲಿ ಸದ್ಯ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಸ್, ಆಟೊ, ಕ್ಯಾಬ್‌ಗಳ ಸಂಚಾರ ಎಂದಿನಂತೆ ಇದೆ.
ಹೊಸಪೇಟೆಯ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಉಳಿದಂತೆ ಹೋಟೆಲ್‌ಗಳು ತೆರೆದಿದ್ದು, ಅಂಗಡಿ ಮುಂಗಟ್ಟುಗಳು ತೆರೆಯಲು ಸಿದ್ಧತೆ ನಡೆದಿದೆ.
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ಶುಕ್ರವಾರ ಕನ್ನಡಪರ ಸಂಘಟನೆಗಳ ಮುಖಂಡರು ಕೈಯಲ್ಲಿ ಎಳೆ ನೀರು ಹಿಡಿದು ಪ್ರತಿಭಟನೆ ನಡೆಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಜ್ಯ ಬಂದ್ ಹಿನ್ನೆಲೆ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರಿಂದ ಯಾದಗಿರಿ ನಗರದಲ್ಲಿ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ಬಳಿಯೇ ಪ್ರತಿಭಟನೆಗೆ ನಡೆಸಿದರು. ನಂತರ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಯಲು ಕರವೇ ಕಾರ್ಯಕರ್ತರು ಮುಂದಾದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕ ಬಂದ್‌ಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ಕರೆನೀಡಿರುವ ಕರ್ನಾಟಕ ಬಂದ್ ಗೆ ಚಿತ್ರದುರ್ಗದಲ್ಲಿ ಬೆಂಬಲ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಣಕು ತಿಥಿ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಸೇರಿದ ಕರುನಾಡು ವಿಜಯಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾವಚಿತ್ರದ ಮೇಲೆ ರಕ್ತ ಚೆಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭನಕಾರರನ್ನು ವಶಕ್ಕೆ ಪಡೆದರು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಕರ್ನಾಟಕ ಬಂದ್‌ಗೆ ಕೋಲಾರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಂಗಡಿ, ಮಳಿಗೆ, ಹೋಟೆಲ್, ಸಿನಿಮಾ ಮಂದಿರ ಬಾಗಿಲು ತೆರೆದಿಲ್ಲ.
ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ, ಸಾರಿಗೆ ವ್ಯತ್ಯಯದಿಂದ ತೊಂದರೆ ಉಂಟಾಗಿದೆ. ವಾಹನಗಳನ್ನು ಪ್ರತಿಭಟನಕಾರರು ಅಡ್ಡ ಹಾಕುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೂ ಕಡಿಮೆ ಸಂಖ್ಯೆಯಲ್ಲಿದ್ದಾರೆ, ಬಸ್‌ಗಳೂ ಇಲ್ಲ.
ಮಂಡ್ಯದಲ್ಲಿ ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ಕೈ ಕೊಯ್ದುಕೊಂಡು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಮೇಲೆ ಹರಿಸಿದರು.
'ರಕ್ತ ಬಿಜಾಸುರ ಸ್ಟಾಲಿನ್‌ಗೆ ರಕ್ತ ಕೊಡುತ್ತೇವೆ, ನೀರು ಕೊಡುವುದಿಲ್ಲ' ಎಂದು ಘೋಷಣೆ ಕೂಗಿದರು.
ದಾವಣಗೆರೆ ನಗರದಲ್ಲಿ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿಭಟನೆಗೆ ಸೀಮಿತವಾದ ಬಂದ್. ಕನ್ನಡಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಕರ್ನಾಟಕ ಬಂದ್‌ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜುಗಳು ತೆರೆದಿವೆ. ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ.
ಎಲ್ಲೂ ಪ್ರತಿಭಟನೆಗಳು ನಡೆದಿಲ್ಲ. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇದೆ. ಬಂದ್‌ನ ವಾತಾವರಣ ಎಲ್ಲೂ ಕಂಡುಬಂದಿಲ್ಲ.
ಭಾರತೀಯ ಜನತಾ ಪಾರ್ಟಿಯ ನಗರ ಘಟಕದವರು ಕರ್ನಾಟಕ ಬಂದ್ ಬೆಂಬಲಿಸಿ ಮೈಸೂರಿನಲ್ಲಿ ಶುಕ್ರವಾರ ಬೈಕ್ ರ‌್ಯಾಲಿ ನಡೆಸಿದರು.
ನಂಜನಗೂಡು ನಗರದಲ್ಲಿ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಲಿನ ಡೇರಿ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಕ್ಲಿನಿಕ್‌ಗಳು ತೆರೆದಿವೆ. ಉಳಿದ ಅಂಗಡಿಗಳು ಬಂದ್ ಆಗಿವೆ. ಬಸ್ ಸಂಚಾರ ಆರಂಭವಾಗಿಲ್ಲ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ವ್ಯಾಪಾರ - ವಹಿವಾಟು ಸ್ಥಗಿತವಾಗಿದೆ. ಬೆಳಿಗ್ಗೆಯಿಂದಲೇ ವ್ಯಾಪಾರಿಗಳು, ಸ್ವಯಂಪ್ರೇರಿತವಾಗಿ ಅಂಗಡಿ-ಮಳಿಗೆ ಬಂದ್ ಮಾಡಿದ್ದಾರೆ.
ಬಂದ್ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲು ಪುರಭವನ ಎದುರು ಹೋರಾಟಗಾರರು ಸೇರಿದ್ದಾರೆ. ಆದರೆ, ಮೆರವಣಿಗೆಗೆ ಅವಕಾಶವಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ.
ಕರ್ನಾಟಕ ಬಂದ್‌ಗೆ ಹಾಸನ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿಗಳು ಬಾಗಿಲು ಹಾಕಿದ್ದು, ವಾಹನಗಳ ಸಂಚಾರ ವಿರಳವಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಶುಕ್ರವಾರ ಬೀದರ್ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ.
ಶಾಲಾ,ಕಾಲೇಜುಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತಿವೆ. ವ್ಯಾಪಾರ ವಹಿವಾಟು ಸಹಜವಾಗಿದೆ. ಜನಜೀವನ ಎಂದಿನಂತಿದೆ. ತಾಲ್ಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್‌ಗೆ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು ರಸ್ತೆಗಿಳಿದಿವೆ. ಆಟೋ, ಟಂಟಂ ಎಂದಿನಂತೆ ಸಂಚರಿಸುತ್ತಿವೆ. ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ಮಾರುಕಟ್ಟೆಗಳಲ್ಲಿ ವ್ಯಾಪಾರ ಎಂದಿನಂತೆಯೇ ನಡೆಯುತ್ತಿದೆ.
ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಬಂದ್ ಕರೆಗೆ ರಾಮನಗರ ನಗರದ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಸ್ ನಿಲ್ದಾಣದ ಬಳಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಬೆಂಗಳೂರು- ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ಅ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಬೆಂಗಳೂರು ನಗರದ ಪುರಭವನ ಎದುರು ಜಮಾಯಿಸಿ ಮೆರವಣಿಗೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದು, ಇದೇ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಗಾಜು ಒಡೆಯಲಾಗಿದೆ.
ಮೆರವಣಿಗೆ ತಡೆದಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಆಕ್ರೋಶ ವ್ಯಕ್ತಪಡಿಸಿದ ಕೆಲ ಹೋರಾಟಗಾರರು, ಬಸ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಗಾಜು ಒಡೆದರು.
ರಾಜ್ಯ ಬಂದ್‌ಗೆ ತುಮಕೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಾಲು ಸಾಲಾಗಿ ನಿಂತಿವೆ. ಖಾಸಗಿ ಬಸ್ ಮಾಲೀಕರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿದ್ದು, ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ.
ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಔಷಧ ಅಂಗಡಿಗಳು ಬಿಟ್ಟು ಬೇರೆ ಯಾವ ಮಳಿಗೆಗಳೂ ತೆರೆದಿಲ್ಲ. ಕಾವೇರಿ ಹೋರಾಟ ಕ್ರಿಯಾ ಸಮಿತಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದ ಸಿದ್ಧಾರ್ಥ ಚಿತ್ರಮಂದಿರದ ಮುಂದೆ ಅಂಟಿಸಿದ್ದ ತಮಿಳು ಸಿನಿಮಾದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿನ ವಾಹನಗಳನ್ನು ತಡೆದರು.
ತಮಿಳು ನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ, ವಿವಿಧ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಬಂದ್ ಅಂಗವಾಗಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆಯಲೆತ್ನಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿ ರೈತಸಂಘದ ಸದಸ್ಯರನ್ನು ಪೊಲೀಸರು ಬಂಧಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಉಕ್ಕಡ ಬಳಿ ಹೆದ್ದಾರಿ ತಡೆಯಲು ಯತ್ನಿಸಿದರು. ಜಾನುವಾರುಗಳೊಂದಿಗೆ ಹೆದ್ದಾರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಎಳೆದು ಬಸ್ ನಲ್ಲಿ ಕರೆದೊಯ್ದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು.
ಬಾಗಲಕೋಟೆಯಲ್ಲಿ ದೇಸಾಯಿ ಚಲನಚಿತ್ರದ ಚಿತ್ರೀಕರಣ ನಡೆಸುತ್ತಿರುವ ಚಿತ್ರ ತಂಡವೂ ಚಿತ್ರೀಕರಣ ಬಂದ್ ಮಾಡಿ ಪ್ರತಿಭಟನೆ ನಡೆಸಿತು.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಾವೇರಿ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್‌ಗೆ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಶುಕ್ರವಾರ ಕೂಡ ಎಲ್ಲ ಶಾಲೆ, ಕಾಲೇಜು, ಅಂಗಡಿಗಳು ತೆರೆದವು. ಮಾರುಕಟ್ಟೆಗಳಲ್ಲಿ ಜನಸಂಚಾರ ಎಂದಿನಂತಿತ್ತು.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ನಟರಾದ ಶಿವರಾಜ್‌ಕುಮಾರ್, ದರ್ಶನ್, ದುನಿಯಾ ವಿಜಯ್, ಶ್ರೀಮುರಳಿ, ಅನಿರುದ್ಧ, ನಟಿ ಉಮಾಶ್ರೀ, ಪೂಜಾಗಾಂಧಿ, ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದಾರೆ.
ಕಾವೇರಿ ಕಿಚ್ಚು: ತಲೆ ಬೋಳಿಸಿಕೊಂಡು ಆಕ್ರೋಶ
ಕನಕಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಬಂದ್ ಕರೆ ಅಂಗವಾಗಿ, ಪಟ್ಟಣದಲ್ಲಿ ಶುಕ್ರವಾರ ಹೋರಾಟಗಾರರೊಬ್ಬರು ಮುಕ್ಕಾಲು ಕಿ.ಮೀ. ಉರುಳು ಸೇವೆ ಮಾಡಿದ್ದಾರೆ.
ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು
ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಸಮಿತಿ ಎತ್ತಿ ಹಿಡಿದಿದೆ. ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲು ನಿರ್ದೇಶನ ನೀಡಿದೆ
ಕುಶಾಲನಗರದಲ್ಲಿ ಕಾವೇರಿ ನದಿಗೆ ಇಳಿದು ಪ್ರತಿಭಟನೆ ಮಾಡಲು ಮುಂದಾದ ಕರ್ನಾಟಕ ಕಾವಲುಪಡೆಯ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಶತ ನಡೆಸಿದರು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಶಾಲನಗರ, ಗೋಣಿಕೊಪ್ಪಲಿನಲ್ಲಿ ಮಾತ್ರವೇ ಪ್ರತಿಭಟನೆಗಳು ನಡೆದಿವೆ.
ಉಳಿದಂತೆ ಜಿಲ್ಲೆಯ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ದಕ್ಷಿಣದಲ್ಲಿ ಉತ್ತಮ, ಉತ್ತರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮಗರಾಜನಗರ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಯಿತು. ಉತ್ತರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.