ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೂ ಕಾರಣ ಎಂದು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಪ್ರಾಥಮಿಕ ವರದಿ ಸಲ್ಲಿಸಿದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರಿಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ವಿವರಣೆ ಕೇಳಿದೆ.
ಭೂಕುಸಿತದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಹಾನಿರ್ದೇಶಕರಿಗೂ ನೋಟಿಸ್ ನೀಡಿದೆ.
ಮಹಾರಾಷ್ಟ್ರದ ಪನ್ವೇಲ್ ಅನ್ನು ತಮಿಳುನಾಡಿನ ಕನ್ಯಾಕುಮಾರಿಯೊಂದಿಗೆ ಸಂಪರ್ಕಿಸುವ 1,640 ಕಿ.ಮೀ. ಉದ್ದದ ಹೆದ್ದಾರಿಯು ಶಿರೂರು ಮೂಲಕ ಹಾದು ಹೋಗುತ್ತಿದೆ. ಭೂಕುಸಿತದಿಂದ ಎಂಟು ಮಂದಿ ಸತ್ತಿದ್ದಾರೆ. ನಾಪತ್ತೆಯಾದ ಮೂವರು ಇನ್ನೂ ಪತ್ತೆಯಾಗಿಲ್ಲ. ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯು ಈ ದುರಂತಕ್ಕೆ ಕಾರಣ. ಜತೆಗೆ, ಅಲ್ಪಾವಧಿಯಲ್ಲಿ ಭಾರಿ ಮಳೆಯಾಗಿದ್ದರಿಂದಲೂ ಭೂಕುಸಿತ ಸಂಭವಿಸಿದೆ’ ಎಂದು ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹೆದ್ದಾರಿ ನಿರ್ಮಾಣಕ್ಕೆ ಇಳಿಜಾರು ಪ್ರದೇಶಗಳಲ್ಲಿ ಮಾರ್ಪಾಡು ಮಾಡಿದ್ದರಿಂದ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಯಿತು. ಈ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳ ವಿಸ್ತರಣೆ ಹಾಗೂ ಬೆಟ್ಟಗಳನ್ನು ಲಂಬವಾಗಿ ಕತ್ತರಿಸುವ ಬಗ್ಗೆ ವಿಜ್ಞಾನಿಗಳು ಹಲವು ಸಲ ಎಚ್ಚರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ 3,500–4000 ಮಿ.ಮೀ ಮಳೆಯಾಗುತ್ತದೆ. ಇಂತಹ ಪ್ರದೇಶದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದು ದೊಡ್ಡ ಸವಾಲು. ಸರ್ಕಾರಿ ಇಲಾಖೆಗಳು ರಸ್ತೆ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೊದಲು ಭೂಪ್ರದೇಶದ ಸಮಗ್ರ ಅಧ್ಯಯನ ನಡೆಸುವುದು ಸೂಕ್ತ. ಈ ಬಗ್ಗೆ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಹ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಪರಿಸರ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಆಗಿರುವುದು ಸ್ಪಷ್ಟ’ ಎಂದ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆಯನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಲಾಗಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 30ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.