ADVERTISEMENT

ರಾಜ್ಯದ ಹಲವೆಡೆ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ.. ಇಲ್ಲಿದೆ ಸಮಗ್ರ ಚಿತ್ರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2022, 9:42 IST
Last Updated 22 ಸೆಪ್ಟೆಂಬರ್ 2022, 9:42 IST
ಎನ್‌ಐಎ
ಎನ್‌ಐಎ   

ಬೆಂಗಳೂರು: ಭಯೋತ್ಪಾದಕರಿಗೆ ನೆರವು ನೀಡಿದ ಆರೋಪ ಮೇಲೆ ದೇಶದ 11 ಕಡೆಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ( ಪಿಎಫ್‌ಐ) ಮತ್ತು ಇತರ ಸಂಘಟನೆಗಳು, ವ್ಯಕ್ತಿಗಳ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ನಡೆಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಶೋಧ ನಡೆಯುತ್ತಿದೆ.

ದಾವಣಗೆರೆ ಪಿಎಫ್ಐಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಇಮಾದುದ್ದೀನ್ ವಿಚಾರಣೆ

ದಾವಣಗೆರೆ ನಗರದ ಎಂ.ಸಿ.ಸಿ 'ಬಿ' ಬ್ಲಾಕ್ ನ ಪಿಎಫ್ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಇಮಾದುದ್ದೀನ್ ಮನೆ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಶೋಧ ನಡೆಸಿದರು. ಇಮಾದುದ್ದೀನ್ ನಿವಾಸದ ತಪಾಸಣೆ ನಡೆಸಿದ ಅಧಿಕಾರಿಗಳು, ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ನಂತರ, ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ADVERTISEMENT

ಇಮಾದುದ್ದೀನ್ ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ. ಎನ್ಐಎ ಅಧಿಕಾರಿಗಳ ತಂಡವು ಮಹತ್ವದ ದಾಖಲೆ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿಯ ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಏಜಾಜ್ ಮನೆಯಲ್ಲಿ ₹14 ಲಕ್ಷ ವಶ

ಕಲಬುರಗಿ ನಗರದ ಟಿಪ್ಪು ಸುಲ್ತಾನ್ ನಗರದಲ್ಲಿರುವ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಏಜಾಜ್ ಅಲಿ ಮತ್ತು ರಾಜ್ಯ ಘಟಕದ ಖಜಾಂಚಿ ಶಾಹೀದ್ ನಾಸಿರ್ ಮನೆ ಹಾಗೂ ಕಚೇರಿ ಮೇಲೆ ಎನ್ಐಎ ಅಧಿಕಾರಿಗಳು ನಸುಕಿನ ಜಾವ ದಾಳಿ ನಡೆಸಿದರು.

ಏಜಾಜ್ ಅಲಿ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಶೋಧ ಕಾರ್ಯಾಚರಣೆ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಜಾಜ್ ಮನೆಯಲ್ಲಿ ₹14 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಶಾಹೀದ್ ನಾಸಿರ್ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ.

ಏಜಾಜ್ ಬಂಧನ ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರ ಮತ್ತು ಎನ್ಐಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಪಿಎಫ್‌ಐ ಮುಖಂಡ ಮೊಹಮ್ಮದ್ ಖಲೀಮುಲ್ಲಾ ಮನೆಯಲ್ಲೂ ಶೋಧ

ಮೈಸೂರಿನ ಶಾಂತಿನಗರದ ಪಿಎಫ್ಐ ಮುಖಂಡ ಮೌಲಾನ ಮೊಹಮ್ಮದ್ ಖಲೀಮುಲ್ಲಾ‌ ಮನೆ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಶೋಧ ನಡೆಸಿದರು. ಸ್ಥಳೀಯ ಪೊಲೀಸರ ನೆರವಿನಲ್ಲಿ ನಿವಾಸದ ತಪಾಸಣೆ ನಡೆಸಿದ ಎನ್ಐಎ ಅಧಿಕಾರಿಗಳು, ಖಲೀಮುಲ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಶಾಂತಿನಗರದ ಖಲೀಮುಲ್ಲಾ ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ಇಲ್ಲಿನ ಅಮ್ಮರ್ ಮಸೀದಿಯ ಅಧ್ಯಕ್ಷ ಆಗಿದ್ದರು. ಪಿಎಫ್ಐ ಕಚೇರಿಯಲ್ಲೂ ಎನ್ಐಎ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದಿದೆ.

ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಶಿವಮೊಗ್ಗದ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಶಾಹಿದ್ ಖಾನ್ ಬಂಧನ

ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಪಿಎಫ್‌ಐನ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಶಾಹಿದ್ ಖಾನ್ ಅವರನ್ನು ಗುರುವಾರ ಬೆಳಗಿನ ಜಾವ ಬಂಧಿಸಿ ಕರೆದೊಯ್ದಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಸಿ) ದಾಖಲಿಸಿದ್ದ ಪ್ರಕರಣದ ಸಂಬಂಧ ಶಾಹಿದ್ ಖಾನ್ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆ.ಜಿ. ಹಳ್ಳಿಯ ಲಷ್ಕರ್ ಮೊಹಲ್ಲಾದಲ್ಲಿರುವ ಶಾಹಿದ್ ಖಾನ್ ಮನೆಗೆ ಬಂದ ಬೆಂಗಳೂರು ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ಕರೆದೊಯ್ದಿತು. ಸ್ಥಳೀಯ ಪೊಲೀಸರು ಈ ಕಾರ್ಯಾಚರಣೆಗೆ ನೆರವಾದರು.

ಪಿಎಫ್ಐ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸೆರೆ

ಬೆಂಗಳೂರಿನ ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪಿಎಫ್ಐ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಫಯಾಜ್‌ ಎಂಬುವರನ್ನು ಗುರುವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.

‘ಗಂಗಾವತಿ ನಗರದಲ್ಲಿ ವಾಸವಾಗಿರುವ ಅಬ್ದುಲ್ ಫಯಾಜ್‌ನನ್ನು ಮನೆಗೆ ತೆರಳಿ ಬಂಧಿಸಲಾಗಿದ್ದು, ನಮ್ಮ ತಂಡ ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಗೆ ಆರೋಪಿಯನ್ನು ಕರೆದುಕೊಂಡು ಹೋಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಪ್ರಜಾವಾಣಿಗೆ ಖಚಿತಪಡಿಸಿದ್ದಾರೆ.

ಬೆಂಗಳೂರಿ‌ನಲ್ಲೂ ಎನ್ಐಎ ಶೋಧ

ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ಬಗ್ಗೆ ತನಿಖೆ ಮಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಬೆಂಗಳೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲಾಟ್‌ವೊಂದರಲ್ಲಿ ಗುರುವಾರ ನಸುಕಿನಲ್ಲಿ ಶೋಧ ನಡೆಸಿದರು.

ಸ್ಥಳೀಯ ಪೊಲೀಸರ ಜೊತೆ ರಿಚ್‌ಮಂಡ್ ಟೌನ್‌ನಲ್ಲಿರುವ ಫ್ಲಾಟ್‌ಗೆ ಹೋಗಿದ್ದ ಎನ್‌ಐಎ ತಂಡ, ಎರಡು ಕಡೆ ಶೋಧ ನಡೆಸಿತು. ನಂತರ, ವಾಪಸು ತೆರಳಿತು. ಸದ್ಯ ಫ್ಲ್ಯಾಟ್ ಬಳಿ ಪೊಲೀಸರ ಭದ್ರತೆ ಇದೆ.
ದೇಶ, ರಾಜ್ಯದ ಹಲವು ನಗರಗಳಲ್ಲಿರುವ ಪಿಎಫ್ಐ ಕಚೇರಿ ಹಾಗೂ ಸಂಘಟನೆ ಸದಸ್ಯರ‌ ಮನೆಗಳಲ್ಲಿ ಎನ್ಐಎ ಅಧಿಕಾರಿಗಳು ಗುರುವಾರ ನಸುಕಿನಿಂದಲೇ ಶೋಧ ಆರಂಭಿಸಿದ್ದಾರೆ. ಹಲವರನ್ನು ವಶಕ್ಕೆ‌ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಶೋಧ ನಡೆಸಿದ ಫ್ಲ್ಯಾಟ್ ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಮಂಗಳೂರು: ಎಸ್‌ಡಿಪಿಐ ಕಚೇರಿ ಮೇಲೆ ದಾಳಿ

ಮಂಗಳೂರಿನ ಎಸ್‌ಡಿಪಿಐ ಕಚೇರಿ ಮೇಲೆ ಬೆಳಗಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು, ದಾಖಲೆ ಪರಿಶೀಲಿಸಿ, ವಾಪಸ್ ತೆರಳಿದರು.

ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್, 'ನನಗೆ ತಡವಾಗಿ ಈ ಬಗ್ಗೆ ಮಾಹಿತಿ ದೊರೆಯಿತು. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದರು.

‘ಕೆಲವೊಂದು ದಾಖಲೆ ಪತ್ರ ಹಾಗೂ ನಾವು ಬಳಸಿದ ಲ್ಯಾಪ್ ಟಾಪ್ ಪಡೆದುಕೊಂಡಿದ್ದಾರೆ. ಬಾಡಿಗೆ ಒಪ್ಪಂದ ಪತ್ರ ಹಾಗೂ ನಮ್ಮ‌ ಕಾರ್ಯಕ್ರಮದ ಕೆಲವು ದಾಖಲೆ ತೆಗೆದುಕೊಂಡು ಹೋಗಿದ್ದಾರೆ. ಯಾವ ವಿಚಾರಕ್ಕೆ ದಾಳಿ ಮಾಡಿದ್ದಾರೆ ಎಂದು ಅವರು ತಿಳಿಸಿಲ್ಲ. ಆದರೆ ಇದು ಬಿಜೆಪಿಯ ಕುತಂತ್ರ ಎನ್ನುವುದು ಸ್ಪಷ್ಟ. ನಾವು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ಹೀಗೆ ಮಾಡಿದ್ದಾರೆ' ಎಂದು ಅವರು ಆರೋಪಿಸಿದರು.

ದಾಳಿ ಖಂಡಿಸಿಪ್ರತಿಭಟನೆ: ಪೊಲೀಸರ ವಶಕ್ಕೆ

ಮಂಗಳೂರಿನ ಎಸ್‌ಡಿಪಿಐ ಕಚೇರಿ ಹಾಗೂ ಎಸ್‌ಡಿಪಿಐ ಜಿಲ್ಲಾ ಘಟಕದ ಪ್ರಮುಖರ ಮನೆ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನೆಲ್ಲಿಕಾಯಿ ರಸ್ತೆಯ ಕಚೇರಿ ಸಮೀಪ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಎನ್ಐಎ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕೆಲ ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆದಿತ್ತು.

ಕೆಲವು ಪ್ರಕರಣಗಳಿಗೆ ಸಂಬಂಧಿಸಿ ತನಿಖೆ‌ ನಡೆಯುತ್ತಿದೆ. ಪೊಲೀಸರ ಕೆಲಸಕ್ಕೆ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.