ಬೆಂಗಳೂರು: ಭಯೋತ್ಪಾದಕರಿಗೆ ನೆರವು ನೀಡಿದ ಆರೋಪ ಮೇಲೆ ದೇಶದ 11 ಕಡೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಇತರ ಸಂಘಟನೆಗಳು, ವ್ಯಕ್ತಿಗಳ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ನಡೆಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಶೋಧ ನಡೆಯುತ್ತಿದೆ.
ಪಿಎಫ್‌ಐ ಕಚೇರಿಗಳು, ಮುಖಂಡರ ಮನೆಗಳ ಮೇಲೆ ಎನ್‌ಐಎ ದಾಳಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
‘ತುಷ್ಟೀಕರಣ ನೀತಿಯ ಭಾಗವಾಗಿ ಸಿದ್ದರಾಮಯ್ಯ ಸರ್ಕಾರ ಬಿಡುಗಡೆಗೊಳಿಸಿದ ಪಿಎಫ್‌ಐ ಕಾರ್ಯಕರ್ತರು ದೇಶದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದು ಈಗ ಜಾಹೀರಾಗಿದೆ. ಇವರ ಹೆಡೆಮುರಿ ಕಟ್ಟುವಲ್ಲಿ ಎನ್ಐಎ ಹಾಗೂ ಇ.ಡಿ ತೊಡಗಿದ್ದು, ಸತ್ಯಾಂಶ ಸದ್ಯದಲ್ಲೇ ತನಿಖೆಯಿಂದ ಹೊರಬರಲಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ದಾವಣಗೆರೆ, ಕಲಬುರಗಿ, ಮೈಸೂರು, ಮಂಗಳೂರಿನಲ್ಲಿರುವ ಪಿಎಫ್‌ಐ ಮುಖಂಡರ ಕಚೇರಿ ಹಾಗೂ ಮನೆಗಳ ಮೇಲೆ ಎನ್ಐಎ ಅಧಿಕಾರಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನಲ್ಲೂ ಎನ್ಐಎ ಶೋಧ
ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಬೆಂಗಳೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ವೊಂದರಲ್ಲಿ ಗುರುವಾರ ನಸುಕಿನಲ್ಲಿ ಶೋಧ ನಡೆಸಿದರು.
ಸ್ಥಳೀಯ ಪೊಲೀಸರ ಜೊತೆ ರಿಚ್‌ಮಂಡ್ ಟೌನ್‌ನಲ್ಲಿರುವ ಫ್ಲ್ಯಾಟ್‌ಗೆ ಹೋಗಿದ್ದ ಎನ್‌ಐಎ ತಂಡ, ಎರಡು ಕಡೆ ಶೋಧ ನಡೆಸಿತು. ನಂತರ, ವಾಪಸು ತೆರಳಿತು. ಸದ್ಯ ಫ್ಲ್ಯಾಟ್ ಬಳಿ ಪೊಲೀಸರ ಭದ್ರತೆ ಇದೆ.
ದೇಶ, ರಾಜ್ಯದ ಹಲವು ನಗರಗಳಲ್ಲಿರುವ ಪಿಎಫ್ಐ ಕಚೇರಿ ಹಾಗೂ ಸಂಘಟನೆ ಸದಸ್ಯರ ಮನೆಗಳಲ್ಲಿ ಎನ್ಐಎ ಅಧಿಕಾರಿಗಳು ಗುರುವಾರ ನಸುಕಿನಿಂದಲೇ ಶೋಧ ಆರಂಭಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಶೋಧ ನಡೆಸಿದ ಫ್ಲ್ಯಾಟ್ ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.