ADVERTISEMENT

14 ನಿಗಮ–ಮಂಡಳಿಗೆ ನೇಮಕ

ಕೆಲವು ಹೆಸರು ಕೈಬಿಟ್ಟ ಸಿ.ಎಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 19:32 IST
Last Updated 6 ಜನವರಿ 2019, 19:32 IST
   

ಬೆಂಗಳೂರು: ಕಾಂಗ್ರೆಸ್‌ ಸೂಚಿಸಿದ್ದ 19 ಶಾಸಕರ ಪೈಕಿ ಐವರ ಹೆಸರನ್ನು ಕೈಬಿಟ್ಟು 14 ನಿಗಮ– ಮಂಡಳಿಗಳಿಗೆ ಅಧ್ಯಕ್ಷ
ರನ್ನು ನೇಮಿಸಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾನುವಾರ ಆದೇಶ ಹೊರಡಿಸಿದ್ದಾರೆ. ಎಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ಒಂಬತ್ತು ಶಾಸಕರ ಹೆಸರನ್ನು ಕಾಂಗ್ರೆಸ್‌ ಸೂಚಿಸಿತ್ತು. ಈ ಪೈಕಿ ಎಂಟು ಶಾಸಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಈ ಎಲ್ಲರಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ.

ಕಾಂಗ್ರೆಸ್‌ ಶಿಫಾರಸು ಮಾಡಿದ್ದ ಕೆಲವು ಶಾಸಕರ ಹೆಸರುಗಳನ್ನು ಕೈಬಿಟ್ಟ ಮುಖ್ಯಮಂತ್ರಿ ನಡೆ ‘ದೋಸ್ತಿ’ಗಳ ಮಧ್ಯೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ADVERTISEMENT

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಅವರ ಹೆಸರನ್ನು ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿತ್ತು. ಆದರೆ, ಈ ಸ್ಥಾನದಿಂದ ಕೈಬಿಡುವ ಸೂಚನೆ ಸಿಗುತ್ತಲೇ ಸುಧಾಕರ್‌ ಅವರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದರು. ಈ ಸ್ಥಾನಕ್ಕೆ ನೇಮಕ ಆಗಿಲ್ಲ.

ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಮ್ಮ ಇಲಾಖೆಯ ಅಧೀನದ ಕೆಆರ್‌ಡಿಎಲ್‌ ಅಧ್ಯಕ್ಷ ಹುದ್ದೆಗೆ ಟಿ. ವೆಂಕಟರಮಣಯ್ಯ ಅವರನ್ನು ಸೂಚಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.ಜೆಡಿಎಸ್‌ನ ಸಾ.ರಾ.ಮಹೇಶ ಸಚಿವರಾಗಿರುವ ಖಾತೆಗೆ ಎಸ್‌.ಎನ್‌.ಸುಬ್ಬಾರೆಡ್ಡಿ (ರೇಷ್ಮೆ ಕೈಗಾರಿಕಾ ನಿಗಮ) ಅವರ ನೇಮಕ, ಡಿ.ಸಿ. ತಮ್ಮಣ್ಣ ಸಚಿವರಾಗಿರುವ ಸಾರಿಗೆ ಖಾತೆ ಅಧೀನಕ್ಕೆ ಬರುವ ಬಿಎಂಆರ್‌ಟಿಸಿಗೆ ಎನ್‌.ಎ.ಹ್ಯಾರೀಸ್‌ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು.

ಕುಮಾರಸ್ವಾಮಿ ಜೊತೆ ಸಮಾಲೋಚಿಸದೇ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ವಿ.ಮುನಿಯಪ್ಪ, ಯೋಜನಾ ಆಯೋಗದ ಆಧ್ಯಕ್ಷ ಹುದ್ದೆಗೆ ಶರಣಬಸಪ್ಪ ದರ್ಶನಾಪುರ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಗೆ ಅಜಯ್ ಸಿಂಗ್‌ ಅವರ ಹೆಸರನ್ನು ಕಾಂಗ್ರೆಸ್‌ ನಾಯಕರು ಶಿಫಾರಸು ಮಾಡಿದ್ದರು. ಈ ಸ್ಥಾನಗಳಿಗೂ ನೇಮಕ ಆದೇಶವನ್ನು ಮುಖ್ಯಮಂತ್ರಿ ಹೊರಡಿಸಿಲ್ಲ. ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಸೂಚಿಸಿದ್ದ ಎಂ.ಎ.ಗೋಪಾಲಸ್ವಾಮಿ ಹೆಸರನ್ನೂ ಪಟ್ಟಿಯಿಂದ ಕೈಬಿಡಲಾಗಿದೆ.

ಪರಮೇಶ್ವರ ಅಡ್ಡಗಾಲು?: ಜಿ.ಪರಮೇಶ್ವರ ಸಚಿವರಾಗಿರುವ ಬೆಂಗಳೂರು ಅಭಿವೃದ್ಧಿ ಖಾತೆಯ ಅಡಿಯಲ್ಲಿ ಬರುವ ಬಿಡಿಎಅಧ್ಯಕ್ಷ ಸ್ಥಾನಕ್ಕೆ ಎಸ್‌.ಟಿ. ಸೋಮಶೇಖರ್‌ ಹೆಸರನ್ನು ಕೈ ಹೈಕಮಾಂಡ್‌ ಸೂಚಿತ್ತು. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ‘ಪ್ರಭಾವಿ’ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿ ಸಮಾಧಾನಪಡಿಸಲಾಗಿತ್ತು. ಅವರ ಹೆಸರನ್ನೂ ಕೈಬಿಡಲಾಗಿದೆ. ಅದಕ್ಕೆ ಪರಮೇಶ್ವರ ಅಡ್ಡಗಾಲು ಹಾಕಿದ್ದಾರೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿಬಂದಿದೆ.

ಹೆಸರು; ನಿಗಮ/ಮಂಡಳಿ

ಬಿ.ಕೆ. ಸಂಗಮೇಶ್ವರ; ಕರ್ನಾಟಕ ಭೂ ಸೇನಾ ನಿಗಮ

ಆರ್‌.ನರೇಂದ್ರ; ಆಹಾರ ನಿಗಮ

ಬಿ. ನಾರಾಯಣ ರಾವ್‌; ಅರಣ್ಯ ಅಭಿವೃದ್ಧಿ ನಿಗಮ

ಉಮೇಶ್‌ ಜಿ. ಜಾಧವ್‌; ಕರ್ನಾಟಕ ರಾಜ್ಯ ಉಗ್ರಾಣ ನಿಗಮ

ಟಿ. ರಘುಮೂರ್ತಿ; ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಯಶವಂತರಾಯಗೌಡ ವಿ. ಪಾಟೀಲ; ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಬಿ.ಎ. ಬಸವರಾಜ; ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ

ಬಿ. ಶಿವಣ್ಣ; ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌)

ಎಸ್‌.ಎನ್‌. ನಾರಾಯಣಸ್ವಾಮಿ; ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ

ಮುನಿರತ್ನ; ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ

ಅರಬೈಲ್‌ ಶಿವರಾಮ ಹೆಬ್ಬಾರ್‌; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಸುರೇಶ್‌ ಬಿ.ಎಸ್‌; ಅಧ್ಯಕ್ಷರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ

ಲಕ್ಷ್ಮಿ ಹೆಬ್ಬಾಳಕರ; ಕರ್ನಾಟಕ ರಾಜ್ಯ ಖನಿಜ ನಿಗಮ (ಮೈಸೂರು ಮಿನರಲ್ಸ್‌)

ಟಿ.ಡಿ. ರಾಜೇಗೌಡ; ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ

ಸಂಸದೀಯ ಕಾರ್ಯದರ್ಶಿಗಳು

ಕೆ. ಅಬ್ದುಲ್‌ ಜಬ್ಬಾರ್‌

ಅಂಜಲಿ ಹೇಮಂತ್‌ ನಿಂಬಾಳ್ಕರ

ಐವಾನ್‌ ಡಿಸೋಜಾ

ಕೌಜಲಗಿ ಮಹಂತೇಶ ಶಿವಾನಂದ

ರೂಪಕಲಾ ಎಂ. ಶಶಿಧರ

ಕೆ. ಗೋವಿಂದರಾಜ್‌

ಕೆ. ರಾಘವೇಂದ್ರ ಹಿಟ್ನಾಳ

ಡಿ.ಎಸ್‌. ಹೂಲಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.