ಬೆಂಗಳೂರು: ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಮಂಗಳವಾರ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
‘ಈಗಾಗಲೇ ಹೈಕಮಾಂಡ್‌ಗೆ ಪಟ್ಟಿಯನ್ನು ಕಳುಹಿಸಿದ್ದೇವೆ. ಪಕ್ಷದ ವರಿಷ್ಠರು ಒಪ್ಪಿಗೆ ಕೊಡುವುದು ಮಾತ್ರ ಬಾಕಿ ಇದೆ’ ಎಂದರು.
‘ಡಿ. 4ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅದಕ್ಕೂ ಮೊದಲು ಶಾಸಕರಿಗೆ ನಿಗಮ, ಮಂಡಳಿಗಳ ಸ್ಥಾನ ಹಂಚಿಕೆ ಮಾಡಲಾಗುವುದು. ಎರಡು ಮತ್ತು ಮೂರನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಥಾನ ನೀಡಲಾಗುವುದು’ ಎಂದರು.
ಸಭೆಯಿಂದ ಸಿದ್ದರಾಮಯ್ಯ ನಿರ್ಗಮಿಸಿದ ಬಳಿಕ ಸುರ್ಜೇವಾಲಾ ಜೊತೆ ಡಿ.ಕೆ. ಶಿವಕುಮಾರ್ ಕೆಲಹೊತ್ತು ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
ಸುರ್ಜೇವಾಲಾ ಪ್ರತಿಕ್ರಿಯಿಸಿ, ‘ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಸಹಿತ ಹಲವು ವಿಷಯಗಳ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಹಂತ ಹಂತವಾಗಿ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಭರ್ತಿ ಮಾಡುತ್ತೇವೆ’ ಎಂದರು.
‘ಗ್ಯಾರಂಟಿಗಳ ಅನುಷ್ಠಾನ ವಿಚಾರವಾಗಿಯೂ ನಾವು ಚರ್ಚಿಸಿದ್ದೇವೆ. ಪಾರದರ್ಶಕವಾಗಿ ಕೆಲಸ ಮುಂದುವರಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದರು.
‘ಸದ್ಯ ನಮ್ಮ ಗಮನ ಪಂಚ ರಾಜ್ಯಗಳ ಚುನಾವಣೆ ಕಡೆಗೆ. ಮುಂದೆ ಲೋಕಸಭೆ ಚುನಾವಣೆ ಗುರಿ. ‘ಇಂಡಿಯಾ’ ಮೈತ್ರಿಕೂಟದ ಜೊತೆಗೆ ಕಾಂಗ್ರೆಸ್ ಚುನಾವಣೆಗೆ ಹೋಗಲಿದೆ’ ಎಂದೂ ಹೇಳಿದರು.
ವಿಧಾನಸಭೆಯ 25 ಹಾಗೂ ಪರಿಷತ್ತಿನ ನಾಲ್ವರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗಲಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.