ADVERTISEMENT

ನಿಗಮ, ಮಂಡಳಿ: ಕಾರ್ಯಕರ್ತರಿಂದ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:26 IST
Last Updated 4 ಫೆಬ್ರುವರಿ 2024, 15:26 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನೂ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಂತೆ ಒತ್ತಾಯಿಸಿ ಆಕಾಂಕ್ಷಿಗಳ ದಂಡು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಿವಾಸದ ಕದ ತಟ್ಟುತ್ತಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶೀಘ್ರದಲ್ಲಿ ನೇಮಕ ಪಟ್ಟಿ ಬಿಡುಗಡೆ ಮಾಡಬೇಕು. ಚುನಾವಣಾ ನೀತಿ ಸಂಹಿತೆ ಘೋಷಣೆಯಾದರೆ ನೇಮಕ ಪಟ್ಟಿ ಪ್ರಕಟವಾಗುವುದು ಮತ್ತಷ್ಟು ವಿಳಂಬ ಆಗಬಹುದು ಎಂಬ ಆತಂಕ ಕಾರ್ಯಕರ್ತರನ್ನು ಕಾಡುತ್ತಿದೆ.  

ADVERTISEMENT

ವಿವಿಧ ನಿಗಮ ಮಂಡಳಿಗಳಿಗೆ 34 ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಪೈಕಿ, ಬಹುತೇಕರು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಶಾಸಕರನ್ನು ನೇಮಿಸಿದ ಪಟ್ಟಿ ಹೊರಬರುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಕಾರ್ಯಕರ್ತರನ್ನೂ ನೇಮಕ ಮಾಡಿ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು’ ಎಂದಿದ್ದರು. ಆದರೆ, ಪಟ್ಟಿ ಬಿಡುಗಡೆ ತಡವಾಗುತ್ತಿರುವುದು ಕಾರ್ಯಕರ್ತರನ್ನು ನಿರಾಶರನ್ನಾಗಿ ಮಾಡಿದೆ.

39 ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಗೆ ಸೂಚಿಸಿದೆ ಎಂಬ ಮಾಹಿತಿಯುಳ್ಳ ಪಟ್ಟಿಯೊಂದು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಓಡಾಡುತ್ತಿದೆ. ಈ ಪಟ್ಟಿ ಪಕ್ಷದ ಹೈಕಮಾಂಡ್‌ ಮೂಲಗಳಿಂದಲೇ ಸೋರಿಕೆ ಆಗಿತ್ತು. ಆದರೆ, ಆ ಪಟ್ಟಿಯಲ್ಲಿರುವ ಕೆಲವು ಹೆ‌ಸರುಗಳಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನು ತಡೆಹಿಡಿಯಲಾಗಿತ್ತು. ಆಕ್ಷೇಪ ವ್ಯಕ್ತವಾಗಿರುವ ಹೆಸರುಗಳನ್ನು ಕೈಬಿಟ್ಟು, ಪಟ್ಟಿ ಪರಿಷ್ಕರಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.