ADVERTISEMENT

ಕೋವಿಡ್ ಮಾರ್ಗಸೂಚಿಯಲ್ಲಿ ಪರಿಷ್ಕರಣೆ: ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2021, 11:35 IST
Last Updated 28 ಡಿಸೆಂಬರ್ 2021, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜನವರಿ 7 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೈಟ್‌ ಕರ್ಫ್ಯೂ ವಿಧಿಸಿದೆ. ಅಲ್ಲದೇ ಹೋಟೆಲ್, ಬಾರ್, ರೆಸ್ಟೊರಂಟ್, ಪಬ್ ಹಾಗೂ ಮನರಂಜನಾ ತಾಣಗಳಲ್ಲಿ ಶೇ 50 ರಷ್ಟು ಜನರಿಗೆ ಮಾತ್ರ ಅನುಮತಿ ನೀಡಬೇಕು ಎಂಬ ಆದೇಶ ಮಾಡಿದೆ.

ಈ ಆದೇಶಕ್ಕೆ ಅನೇಕ ಹೋಟೆಲ್ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದು ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಸ್ಪಷ್ಟೀಕರಣ ನೀಡಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

‘ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಆಹಾರ ಮತ್ತು ಪಾನೀಯ ಒದಗಿಸುವ ಸ್ಥಳಗಳಲ್ಲಿ ಮಾತ್ರ ಆಸನಗಳ ಶೇ 50 ರಷ್ಟು ಮಾತ್ರ ಸೇವೆ ನೀಡಬೇಕು. ಉಳಿದಂತೆ ಹೋಟೆಲ್‌ಗಳಲ್ಲಿನ ಕೋಣೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಕೋಣೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು ಹೋಟೆಲ್‌ಗಳ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅನುಮೋದಿತ ಸಾಮರ್ಥ್ಯಕ್ಕೆ ಅನುಗುಣವಾಗು ಆತಿಥ್ಯ ಕಲ್ಪಿಸಬಹುದು’ ಎಂದು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಗೆ ಹೋಟೆಲ್ ಹಾಗೂ ಮನರಂಜನಾ ಸ್ಥಳಗಳಲ್ಲಿ ಜನದಟ್ಟಣೆ ಆಗಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಡಿ 30 ರಿಂದ ಜನವರಿ 2ವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಒಟ್ಟು ಆಸನಗಳ ಶೇ 50 ರಷ್ಟು ಮಾತ್ರ ಕಾರ್ಯಾಚರಿಸುವುದು ಎಂದು ಈ ಹಿಂದೆ ಆದೇಶ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.