ADVERTISEMENT

ತಿಂಗಳೊಳಗೆ ನಿಜಲಿಂಗಪ್ಪ ಮನೆ ಖರೀದಿ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:34 IST
Last Updated 14 ನವೆಂಬರ್ 2024, 15:34 IST
ಶಿವರಾಜ ಎಸ್. ತಂಗಡಗಿ
ಶಿವರಾಜ ಎಸ್. ತಂಗಡಗಿ   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರ ಒಂದು ತಿಂಗಳ ಒಳಗೆ ಖರೀದಿಸಿ, ನೋಂದಣಿ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸೌಧದಲ್ಲಿ ಅಧಿಕಾರಿಗಳ ಜತೆಗೆ ಗುರುವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. 

ಸರ್ಕಾರ ಈಗಾಗಲೇ ₹5 ಕೋಟಿ ಹಣ ಬಿಡುಗಡೆ ಮಾಡಿದೆ. ಕಾನೂನು ಪ್ರಕಾರ ನಿಜಲಿಂಗಪ್ಪ ಅವರ ಮನೆ ಖರೀದಿಸಿ, ಸಂರಕ್ಷಿಸಲು ಹಾಗೂ ಸ್ಮಾರಕವಾಗಿ ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದರು.

ADVERTISEMENT

‘ಮನೆ ಖರೀದಿಗೆ ತಾಂತ್ರಿಕ ಕಾರಣಗಳು ಎದುರಾಗಿದ್ದವು. ಈಗ ನಿಜಲಿಂಗಪ್ಪ ಅವರ ಪುತ್ರ ಹಾಗೂ ಅವರ ಸಂಬಂಧಿಗಳ ಜತೆ ಚರ್ಚೆ ನಡೆಸಲಾಗಿದೆ. ಮನೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ತಂಗಡಗಿ, ‘ನಿಜಲಿಂಗಪ್ಪ ಅವರು ವಾಸವಿದ್ದ ಮನೆ ಖಾತೆಯು ಅವರ ಮೂರನೇ ಪುತ್ರ ಎಸ್.ಎನ್. ಕಿರಣ್ ಶಂಕರ್ ಅವರ ಹೆಸರಿನಲ್ಲಿತ್ತು. ನಿಜಲಿಂಗಪ್ಪ ಅವರು ಬರೆದಿಟ್ಟಿರುವ ಮರಣಪೂರ್ವ ಪತ್ರದಂತೆ ಮನೆ ಖಾತೆ ಪ್ರಸ್ತುತ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ (ಕಿರಣ್ ಶಂಕರ್‌ ಪುತ್ರ) ಅವರ ಹೆಸರಿನಲ್ಲಿದೆ. ಅಧಿಕಾರಿಗಳು ಕಿರಣ್‌ ಜೊತೆ ಚರ್ಚೆ ನಡೆಸಿದ್ದಾರೆ. ₹4.18 ಕೋಟಿ ಮೊತ್ತದಲ್ಲಿ ಮನೆ ಖರೀದಿಸಲು ತೀರ್ಮಾನಿಸಲಾಗಿದೆ. ಮನೆ ಅಭಿವೃದ್ಧಿಗೆ ₹81,50 ಲಕ್ಷ ಹಣ ವೆಚ್ಚ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್, ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಅಶೋಕ್‌ ಛಲವಾದಿ ಉಪಸ್ಥಿತರಿದ್ದರು.

ಕರ್ನಾಟಕ ಏಕೀಕರಣ ಹೋರಾಟದ ಮುಂಚೂಣಿಯಲ್ಲಿದ್ದು ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದ ಎಸ್.ನಿಜಲಿಂಗಪ್ಪನವರ ಮನೆಯನ್ನು ಖರೀದಿಸಿ ಸ್ಮಾರಕವಾಗಿಸುವ ಕಾರ್ಯ ನನ್ನ ಅವಧಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ
ಶಿವರಾಜ್ ಎಸ್.ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.