ಶಿವಮೊಗ್ಗ: ರಾಜ್ಯದಾದ್ಯಂತ ವನ್ಯಜೀವಿ– ಮಾನವ ಸಂಘರ್ಷ ಪ್ರಕರಣ ಹೆಚ್ಚುತ್ತಿ
ರುವುದರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿನ ಕಚೇರಿ ಬಿಟ್ಟು ಕಾಡಿಗೆ ಭೇಟಿ ನೀಡುತ್ತಿಲ್ಲ ಎಂಬ ಕಾರಣಕ್ಕೆ 9 ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ
ಧಿಕಾರಿ (ಪಿಸಿಸಿಎಫ್) ಹಾಗೂ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಹುದ್ದೆಗಳನ್ನು ರಾಜ್ಯದ ವಿವಿಧೆಡೆಗೆ ವರ್ಗಾಯಿಸಲಾಗಿದೆ.
ಜನವಸತಿ ಪ್ರದೇಶಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಎಂಟು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ದಾಳಿಯಿಂದ ಕೆಲವೆಡೆ ಜೀವಗಳು ಬಲಿಯಾಗಿವೆ. ಆನೆ ಹಿಂಡಿನಿಂದ ಬೆಳೆಹಾನಿ ಆಗುತ್ತಿರುವ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿತ್ತು.
ಹಿರಿಯ ಅರಣ್ಯಾಧಿಕಾರಿಗಳ ಕಾರ್ಯ
ವೈಖರಿ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾ
ಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಚೇರಿ ಬಿಟ್ಟು ಕಾಡಿಗೆ ತೆರಳುವಂತೆ ಸೂಚಿಸಿದ್ದರು. ಸಭೆಯ ಬೆನ್ನಲ್ಲೇ ಹುದ್ದೆಗಳನ್ನು ಬೆಂಗಳೂರಿನಿಂದ ಹೊರಗಡೆಗೆ ಸ್ಥಳಾಂತ
ರಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಅದರಲ್ಲೂ ಪಿಸಿಸಿಎಫ್ ಹಾಗೂ ಎಪಿಸಿಸಿಎಫ್ ಹುದ್ದೆಗಳನ್ನು ಕಚೇರಿ ಮತ್ತು ಸಿಬ್ಬಂದಿ ಸಮೇತ ಶಿವಮೊಗ್ಗ, ಚಿತ್ರದುರ್ಗ, ಹಾಸನ, ಮೈಸೂರು, ಮಡಿಕೇರಿ, ಧಾರವಾಡ ಸೇರಿ ರಾಜ್ಯದ ವಿವಿಧ ಭಾಗಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ ಈ ಹುದ್ದೆಗಳನ್ನು ವರ್ಗಾಯಿಸಿ ಅರಣ್ಯ, ಜೀವಿಸ್ಥಿತಿ ಮತ್ತು ಪರಿಸರ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್. ಇಂದ್ರೇಶ್ ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಪಿಸಿಸಿಎಫ್ ಹಾಗೂ ಎಪಿಸಿಸಿಎಫ್ ಹುದ್ದೆಗಳು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಕೇಡರ್‌ನವಾಗಿವೆ. ಅಧಿಕಾರಿ, ಸಿಬ್ಬಂದಿ ಸಹಿತ ಕಚೇರಿಗಳನ್ನು ಸ್ಥಳಾಂತರಿಸಿರುವುದರಿಂದ ಅವರಿಗೆ ಹುದ್ದೆಗೆ ತಕ್ಕಂತೆ ಕಚೇರಿ, ವಸತಿ ಗೃಹ, ಓಡಾಟಕ್ಕೆ ವಾಹನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಬೇಡಿಕೆ ಅಧಿಕಾರಿಗಳ ವಲಯದಿಂದ ಕೇಳಿಬಂದಿದೆ’ ಎಂದು ಮೂಲಗಳು ತಿಳಿಸಿವೆ.
‘ಐಎಎಸ್ ಹಾಗೂ ಐಪಿಎಸ್‌ನ ಶೇ 50ರಷ್ಟು ಅಧಿಕಾರಿಗಳು ಬೆಂಗಳೂರಿನ
ಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಆಡಳಿತಾತ್ಮಕ ಕಾರಣದಿಂದ ಅವರನ್ನು
ಹೊರಗಿಟ್ಟು, ನಮ್ಮ ಮೇಲೆ ಮಾತ್ರ ಏಕೆ ಸರ್ಕಾರಕ್ಕೆ ಕೆಂಗಣ್ಣು’ ಎಂಬುದು ಎಪಿಸಿಸಿಎಫ್ ದರ್ಜೆಯ
ಅಧಿಕಾರಿಯೊಬ್ಬರ ಪ್ರಶ್ನೆಯಾಗಿದೆ.
ಶಿವಮೊಗ್ಗಕ್ಕೆ ಅರಣ್ಯ ಭೂ ದಾಖಲೆಗಳ ಕಚೇರಿ
ಅರಣ್ಯ ಹಾಗೂ ಕಂದಾಯ ಭೂಮಿಯ
ವ್ಯಾಜ್ಯಗಳು, ಒತ್ತುವರಿಗೆ ಸಂಬಂಧಿಸಿದ ಹೆಚ್ಚಿನ ಸಂಗತಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಹೀಗಾಗಿ ಎಪಿಸಿಸಿಎಫ್ ನೇತೃತ್ವದ ಅರಣ್ಯ ಭೂ ದಾಖಲೆಗಳ ಕಚೇರಿ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿದೆ. ಜಿಲ್ಲೆಯ ಜನ ದಾಖಲೆಗಳನ್ನು ಅರಸಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ. ಆನೆ–ಮಾನವ ಸಂಘರ್ಷ ಹೆಚ್ಚಾಗಿರುವುದರಿಂದ ಆನೆ ಯೋಜನೆ ಕಚೇರಿ ಹಾಸನಕ್ಕೆ, ಹುಲಿ ಯೋಜನೆ ಕಚೇರಿಗಳು ಮೈಸೂರಿಗೆ ವರ್ಗಾವಣೆ ಆಗಿವೆ ಎಂದು
ಅರಣ್ಯಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಯಾವ ಕಚೇರಿಗಳು ಎಲ್ಲಿಗೆ?
* ಎಪಿಸಿಸಿಎಫ್– ಅರಣ್ಯ ಭೂ ದಾಖಲೆಗಳು– ಶಿವಮೊಗ್ಗ
* ಎಪಿಸಿಸಿಎಫ್– ಅರಣ್ಯ ಕಾನೂನು ಕೋಶ– ಚಿತ್ರದುರ್ಗ
* ಎಪಿಸಿಸಿಎಫ್ – ಆನೆ ಯೋಜನೆ– ಹಾಸನ
* ಎಪಿಸಿಸಿಎಫ್ – ಅರಣ್ಯ ಮೌಲ್ಯಮಾಪನ– ಮೈಸೂರು
* ಎಪಿಸಿಸಿಎಫ್– ಕಾಂಪಾ ಕಚೇರಿ – ಬಳ್ಳಾರಿ
* ಎಪಿಸಿಸಿಎಫ್– ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಕಾರ್ಯಕ್ರಮ ಹಾಗೂ ಬಿದಿರು ಯೋಜನೆ– ಧಾರವಾಡ
* ಎಪಿಸಿಸಿಎಫ್ – ಸಾಮಾಜಿಕ ಅರಣ್ಯ ಹಾಗೂ ಯೋಜನೆಗಳು– ಧಾರವಾಡ
* ಪಿಸಿಸಿಎಫ್ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ– ಮಡಿಕೇರಿ
* ಪಿಸಿಸಿಎಫ್ – ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ– ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.