ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಗೃಹ ಇಲಾಖೆಗೆ ಹಂಚಿಕೆಯಾಗಿದ್ದ 221 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಬಳಸಿಕೊಂಡು ಒಂಬತ್ತು ಹೊಸ ಪೊಲೀಸ್ ಉಪ ವಿಭಾಗ ಹಾಗೂ ಬೆಂಗಳೂರಿನಲ್ಲಿ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಆರಂಭಿಸಲು ಅನುಮತಿ ನೀಡಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಐದು, ಮಂಗಳೂರು, ಹುಬ್ಬಳ್ಳಿ– ಧಾರವಾಡ ಹಾಗೂ ಕಲಬುರಗಿ ನಗರ ಪೊಲೀಸ್ ಕಮಿಷನರೇಟ್‌ಗಳ ಸಿಸಿಬಿ ಘಟಕಗಳಿಗೆ ತಲಾ ಒಂದು ಡಿವೈಎಸ್‌ಪಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಎಸಿಬಿಯಲ್ಲಿರುವವರಲ್ಲಿ ಬಾಕಿ ಉಳಿಯುವ 33 ಹಾಗೂ ಇಲಾಖೆಯಲ್ಲಿ ಹೆಚ್ಚುವರಿಯಾಗಿರುವ ಏಳು ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಬಳಸಿಕೊಂಡು 15 ಜಿಲ್ಲೆಗಳ 40 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ.
ತಲಘಟ್ಟಪುರ, ಬೆಳ್ಳಂದೂರು, ಹೆಣ್ಣೂರು ಮತ್ತು ಮಹದೇವಪುರ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ತಲಾ ಒಬ್ಬ ಇನ್‌ಸ್ಪೆಕ್ಟರ್, ಒಟ್ಟು 46 ಹೆಡ್ ಕಾನ್‌ಸ್ಟೆಬಲ್, 115 ಕಾನ್‌ಸ್ಟೆಬಲ್ ಸೇರಿದಂತೆ 165 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಈ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ.
ಒಂಬತ್ತು ಉಪ ವಿಭಾಗ: ಬೆಂಗಳೂರು ನಗರದಲ್ಲಿ ವಿಜಯನಗರ ಸಂಚಾರ ಉಪ ವಿಭಾಗ, ಎಚ್.ಎಸ್.ಆರ್. ಬಡಾವಣೆ ಸಂಚಾರ ಉಪ ವಿಭಾಗ, ಪೀಣ್ಯ, ಉಪ ವಿಭಾಗ, ಕೆಂಗೇರಿ ಉಪ ವಿಭಾಗಗಳು, ಮೈಸೂರು ನಗರದಲ್ಲಿ ವಿಜಯನಗರ ಉಪ ವಿಭಾಗ, ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ–2 ಉಪ ವಿಭಾಗ, ಹಾಸನ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಉಪ ವಿಭಾಗ, ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ಗ್ರಾಮಾಂತರ ಉಪ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಉಪ ವಿಭಾಗಗಳನ್ನು ಸೃಜಿಸಲಾಗಿದೆ.
ವೃತ್ತ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿದ್ದ 40 ಠಾಣೆಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಕಾಲಹರಣ:ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆಗಸ್ಟ್ 11ರಂದು ತೀರ್ಪು ನೀಡಿತ್ತು. ಅಂದಿನಿಂದಲೇ ಎಸಿಬಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದರು. ಎಸಿಬಿಯಲ್ಲಿದ್ದ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗಿತ್ತು.
ಒಟ್ಟು 445 ಅಧಿಕಾರಿಗಳು ಮತ್ತು ಸಿಬ್ಬಂದಿ ಎಸಿಬಿಯಲ್ಲೇ ಉಳಿದಿದ್ದರು. ಲೋಕಾಯುಕ್ತ ಮತ್ತು ಗೃಹ ಇಲಾಖೆಗೆ ಶೇಕಡ 50ರಷ್ಟು ಹುದ್ದೆಗಳನ್ನು ಹಂಚಿಕೆ ಮಾಡಿ ನವೆಂಬರ್ 19ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈ ಹುದ್ದೆಗಳಿಗೆ ಮಂಜೂರಾತಿ ಇಲ್ಲದ ಕಾರಣದಿಂದ ತಿಂಗಳು ಕಳೆದರೂ ಸ್ಥಳನಿಯುಕ್ತಿ ಸಾಧ್ಯವಾಗಿರಲಿಲ್ಲ.
ಈ ಕುರಿತು ‘ಪ್ರಜಾವಾಣಿ’ಯ ಡಿ.10ರ ಸಂಚಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಡಿ.12ರಂದು ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಈ ಹುದ್ದೆಗಳ ಸೃಜನೆಗೆ ಮಂಜೂರಾತಿ ಕೋರಿದ್ದರು. ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿ ಬುಧವಾರ ಆದೇಶ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.