ADVERTISEMENT

ರಾಜ್ಯಕ್ಕೆ ಹೆಚ್ಚಿನ ಸಹಕಾರ: ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:25 IST
Last Updated 2 ಜುಲೈ 2021, 14:25 IST

ಬೆಂಗಳೂರು: ‘ಕರ್ನಾಟಕವು ಜೈವಿಕ ವಿಜ್ಞಾನ ಹಾಗೂ gದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಸಹಕಾರ ನೀಡಲು ಸಿದ್ಧ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ಉದ್ಯಮಿಗಳು ಹಾಗೂ ನವೋದ್ಯಮಗಳ ಪ್ರಮುಖರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ ಹಾಗೂ ಶೈಕ್ಷಣಿಕ ವಲಯಗಳ ನಡುವಣ ಸಮನ್ವಯತೆಯಿಂದ ಜನರ ಬದುಕಿನ ಮಟ್ಟ ಸುಧಾರಿಸಲು ಮೋದಿ ನೇತೃತ್ವದ ಸರ್ಕಾರ ಒತ್ತು ನೀಡಿದೆ’ ಎಂದರು.

ADVERTISEMENT

‘ಕರ್ನಾಟಕ ಸರ್ಕಾರವು ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಬೆಳವಣಿಗೆಗೆ ದೇಶದಲ್ಲೇ ಮಾದರಿಯಾಗುವ ವಾತಾವರಣ ಸೃಷ್ಟಿಸಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ’ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ‘ಕಿಣ್ವಗಳು, ಬಯೋಫಾರ್ಮಾ, ಬಯೋಫಾರ್ಮಸ್ಯೂಟಿಕಲ್, ಸಸ್ಯ ಅನುವಂಶೀಯತೆ, ವಂಶವಾಹಿನಿಗಳ ಅನುಕ್ರಮಣಿಕೆ, ಜೈವಿಕ ಸಂಸ್ಕರಣೆಗೆ ಸಂಬಂಧಿಸಿದ ಆವಿಷ್ಕಾರಗಳಿಗೆ ಬೆಂಗಳೂರು ಪ್ರಮುಖ ನೆಲೆಯಾಗಿದೆ.ಈ ಕ್ಷೇತ್ರವು ಹೆಚ್ಚಿನ ಉದ್ಯೋಗ ಸೃಷ್ಟಿಸುವ ಜೊತೆಗೆ ಉತ್ಪಾದಕತೆ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ’ ಎಂದರು.

‘ಆಹಾರ ಭದ್ರತೆ, ಆರೋಗ್ಯಸೇವೆ, ಶುದ್ಧ ಇಂಧನ, ಸ್ವಚ್ಛ ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ರಾಜ್ಯವು ಸ್ಪರ್ಧಾತ್ಮಕ ಸಂಸ್ಥೆಯ (ಐಎಫ್‌ಸಿ) ಸಹಭಾಗಿತ್ವದಲ್ಲಿ ‘ಕರ್ನಾಟಕ ನಾವೀನ್ಯತಾ ಒಳನೋಟ-2030’ ಹೊರತರಲು ತಯಾರಿ ನಡೆಸುತ್ತಿದೆ’ ಎಂದು ವಿವರಿಸಿದರು.

ರಾಜ್ಯ ಜೈವಿಕ ತಂತ್ರಜ್ಞಾನ ಕಾರ್ಯಪಡೆ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್‌ ಬಜಾಜ್‌, ಬಯೋ ಇನೋವೇಷನ್‌ ಸೆಂಟರ್‌ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐ.ಟಿ ನಿರ್ದೇಶಕಿ ಮೀನಾ ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.