ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ: ಜನವರಿ 5ಕ್ಕೆ ನಿತಿನ್ ಗಡ್ಕರಿ ಪರಿಶೀಲನೆ

ಜಿಲ್ಲಾ, ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 6:59 IST
Last Updated 29 ಡಿಸೆಂಬರ್ 2022, 6:59 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಬೆಳಗಾವಿ: ‘ಕೇಂದ್ರ ಭೂ ಸಾರಿಗೆ ಮತ್ತು ಹೆದ್ಧಾರಿ ಸಚಿವ ನಿತಿನ್ ಗಡ್ಕರಿ ಅವರು ಜ. 5ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹೆದ್ದಾರಿಯಲ್ಲಿನ ಉಬ್ಬು, ತಗ್ಗುಗಳನ್ನು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು’ ಎಂದು ತಿಳಿಸಿದರು.

‘ಇದು ಎಕ್ಸ್‌ಪ್ರೆಸ್ ಹೆದ್ದಾರಿ. ಬೆಂಗಳೂರು-ಮೈಸೂರಿಗೆ ನೇರ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶ.ಇಂತಹ ರಸ್ತೆಗಳಲ್ಲಿ ಒಂದೆರಡು ಕಡೆ ಮಾತ್ರ ಸ್ಥಳೀಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯ. ಆದರೂ, ಮಂಡ್ಯ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ಸಂಪರ್ಕ ಕಲ್ಪಿಸುವ ಪ್ರಸ್ತಾವವನ್ನು ನಿತಿನ್‌ ಗಡ್ಕರಿಗೆ ಅವರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಮರಿತಿಬ್ಬೇಗೌಡ ಅವರು ಮಾತನಾಡಿ, ‘ಈ ಹೆದ್ದಾರಿಯಲ್ಲಿನ ಮೇಲ್ಸೇತುವೆಯ ಕೆಳಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಲ್ಲ. ಸರ್ವೀಸ್‌ ರಸ್ತೆ ಕೇವಲ ಏಳೂವರೆ ಮೀಟರ್ ಅಗಲವಿದೆ. ಈ ಯೋಜನೆಯ ಉಸ್ತುವಾರಿ ಅಧಿಕಾರಿ ಶ್ರೀಧರ್‌ ಯಾರಿಗೂ ಸಿಗುತ್ತಿಲ್ಲ. ಅವರೇನಾದರೂ ಮಂಡ್ಯದವರಿಗೆ ಸಿಕ್ಕರೆ ಕಟ್ಟಿ ಹಾಕಿ ಚಾಟಿಯಿಂದ ಹೊಡೆಯುತ್ತಾರೆ. ಮಂಡ್ಯ ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನವಾಗಿದೆ. ಆದರೆ, ಆ ಭಾಗದ ರೈತರು ರಸ್ತೆ ಬಳಸದಂತೆ ಯೋಜನೆ ರೂಪಿಸಲಾಗಿದೆ. ಹೀಗಾದರೆ, ಆ ಭಾಗ ಅಭಿವೃದ್ಧಿಯಾಗುವುದು ಹೇಗೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.