ಬೆಂಗಳೂರು: 'ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು ಕರಾವಳಿಗೆ 'ನಿವಾರ್' ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಇದೇ 25ರಿಂದ 27ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ' ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.
'ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆ ಇದೆ. ನ.25ರಂದು ಪಾಂಡಿಚೆರಿ ಹಾಗೂ ಹಾಗೂ ತಮಿಳುನಾಡು ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ರಾಜ್ಯದಲ್ಲೂ ಮಳೆಯಾಗಲಿದೆ' ಎಂದವರು ತಿಳಿಸಿದರು.
'ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಎರಡೂ ದಿನ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ' ಎಂದು ಮಾಹಿತಿ ನೀಡಿದರು.
ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಮುಂದಿನ ವಾರದಲ್ಲಿ ಚಳಿ ತೀವ್ರಗೊಳ್ಳಲಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಕಾರವಾರದಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಹಾಗೂ ದಾವಣಗೆರೆಯಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.