ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಅಧ್ಯಕ್ಷರಾಗಿ ‘ಎಕ್ಸ್‌ಕ್ಯೂಸ್ ಮಿ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎನ್.ಎಂ.ಸುರೇಶ್ ಆಯ್ಕೆಯಾಗಿದ್ದಾರೆ.
ಶನಿವಾರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ 65ನೇ ವರ್ಷದ ವಾರ್ಷಿಕ ಚುನಾವಣೆ ನಡೆದಿತ್ತು. ಈ ಬಾರಿ ಮತದಾನಕ್ಕೆ ಇವಿಎಂ ಬಳಸಲಾಗಿತ್ತು. ಒಟ್ಟು 1,599 ಮತಗಳ ಪೈಕಿ 967 ಮತಗಳು ಚಲಾವಣೆಯಾಗಿದ್ದು, ಎನ್.ಎಂ.ಸುರೇಶ್ 337 ಮತ ಪಡೆದರು. ಈ ಬಾರಿ ವಿತರಕರ ವಲಯದಿಂದ ಅಧ್ಯಕ್ಷರು ಆಯ್ಕೆ ನಡೆದಿತ್ತು. ಎನ್.ಎಂ.ಸುರೇಶ್ ಅವರ ಜೊತೆ ಗಣೇಶ್ ಎ.(204 ಮತ), ಶ್ರೀನಿವಾಸ್ ಎಚ್.ಸಿ.(217 ಮತ) ಹಾಗೂ ಸುರೇಶ್ ವಿ.ಎಚ್.(ಮಾರ್ಸ್ ಸುರೇಶ್)(181ಮತ) ಕಣದಲ್ಲಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಪ್ರಮಿಳಾ ಜೋಷಾಯ್, ವಿತರಕ ವಲಯದಿಂದ ವೆಂಕಟೇಶ್ ಜಿ. ಹಾಗೂ ಪ್ರದರ್ಶಕ ವಲಯದಿಂದ ನರಸಿಂಹಲು ಎಂ. ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಭಾ.ಮ.ಗಿರೀಶ್, ವಿತರಕ ವಲಯದಿಂದ ಸುಬ್ರಮಣಿ ವಿ.(ಕರಿಸುಬ್ಬು) ಆಯ್ಕೆಯಾಗಿದ್ದಾರೆ. ಪ್ರದರ್ಶಕ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಖಜಾಂಚಿಯಾಗಿ ಜಯಸಿಂಹ ಮುಸುರಿ ಬಿ.ಕೆ. ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳು ಭಾನುವಾರ(ಸೆ.24) ಮಧ್ಯಾಹ್ನ ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.