ಬೆಂಗಳೂರು: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಕೆಲವು ಶಾಸಕರು ಸೇರಿ ಉತ್ತರ ಕರ್ನಾಟಕದ ಭಾಗದಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಅವರು ವರಿಷ್ಠರ ಅನುಮತಿ ಪಡೆದುಕೊಂಡು ಮಾಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಸಂತನಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ವಿಷಯ ತಿಳಿಸಿದರು.
ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಉತ್ತರಕರ್ನಾಟಕದಲ್ಲಿ ಪಾದಯಾತ್ರೆ ಮಾಡುವುದಕ್ಕೆ ಕೆಲವು ಶಾಸಕರು ನಿರ್ಧಾರ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಅವರ ಪಾದಯಾತ್ರೆಯಿಂದ ಪಕ್ಷದ ಸಂಘಟನೆ ಪೂರಕವಾಗಿರಬೇಕು. ಅದಕ್ಕಿಂತ ಮುಖ್ಯವಾಗಿ ವರಿಷ್ಠರ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ದೆಹಲಿಯಲ್ಲಿ ಚರ್ಚೆ
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯೋಗೇಶ್ವರ್ ಅವರ ವರಿಷ್ಠರ ಭೇಟಿಯಿಂದ ಪಕ್ಷದ ಸಂಘಟನೆಗೆ ಲಾಭ ತರಬೇಕು ಎಂದರು.
ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಯೋಗೇಶ್ವರ್ ಅವರು ಆಕಾಂಕ್ಷೆ ವ್ಯಕ್ತಪಡಿಸಿದ್ದು, ಅದರಲ್ಲಿ ತಪ್ಪೇನು ಇಲ್ಲ. ಚನ್ನಪಟ್ಟಣದಲ್ಲಿ ಅವರಿಗೆ ಅವರದೇ ಆದ ಹಿಡಿತ ಮತ್ತು ಬೆಂಬಲವಿದೆ. ಬಿಜೆಪಿ–ಜೆಡಿಎಸ್ ಒಗ್ಗಟ್ಟಿನಿಂದ ಮುನ್ನಡೆಯಬೇಕಾದ ಸಂದರ್ಭವಿದು. ಕುಮಾರಸ್ವಾಮಿ ಪ್ರತಿನಿಧಿಸಿದ್ದ ಕ್ಷೇತ್ರವದು. ಈ ಎಲ್ಲ ಹಿನ್ನೆಲೆಯಲ್ಲಿ ದೆಹಲಿ ಮಟ್ಟದಲ್ಲಿ ಎರಡೂ ಪಕ್ಷಗಳ ನಾಯಕರು ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಲೋಕಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವತ್ಥನಾರಾಯಣ ಅವರ ಸಮಿತಿ ವರದಿ ಬಗ್ಗೆ ಮಾಹಿತಿ ಇಲ್ಲ. ನಾನೂ ಕೂಡ ಅಶ್ವತ್ಥನಾರಾಯಣ ಅವರ ಜತೆ ಚರ್ಚೆ ಮಾಡುತ್ತೇನೆ ಮತ್ತು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರೈತರಿಗೆ ಪರಿಹಾರಕ್ಕೆ ಆಗ್ರಹ
ತುಂಗಭದ್ರಾ ಅಣೆಕಟ್ಟಿನ ಗೇಟ್ ಚೈನ್ ಮುರಿದಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗಿ ಭತ್ತದ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಕೂಡಲೇ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಈ ಬಾರಿ ಅಣೆಕಟ್ಟೆಗಳು ಭರ್ತಿಯಾದ ಬಗ್ಗೆ ರೈತರು ಸಂತಸದಿಂದಿದ್ದರು. ತುಂಗಭದ್ರಾ ಅಣೆಕಟ್ಟಿಗೆ ಮುಖ್ಯ ಎಂಜಿನಿಯರ್ ಅನ್ನು ನೇಮಿಸಿಲ್ಲ. ಜಲಾಶಯದ ಗೇಟ್ ಮುರಿಯಲು ರಾಜ್ಯ ಸರ್ಕಾರ ನಿರ್ಲಕ್ಷ್ಯವೇ ಕಾರಣ. ಈ ದುರ್ಘಟನೆಯಿಂದ ಪ್ರತಿ ದಿನ 98 ಸಾವಿರ ಕ್ಯುಸೆಕ್ ನೀರು ಹೊರಗೆ ಹರಿಯುತ್ತಿದೆ. ಅಪಾರ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಬೇಕಾಗಿದೆ. ಇದರಿಂದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದು ಬೆಳೆ ತೆಗೆಯವುದೂ ಕಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವರು ಸಂಪನ್ಮೂಲದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡ ಹಾಗಿದೆ. ಆದರೆ, ಜಲ, ಜನ, ರೈತರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.