ADVERTISEMENT

ವರಮಾನ ಸಂಗ್ರಹಕ್ಕಾಗಿ ಆಸ್ತಿ ನಗದೀಕರಣ ಪ್ರಸ್ತಾವ ಇಲ್ಲ: ಸಚಿವಾಲಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 1:20 IST
Last Updated 21 ಜೂನ್ 2024, 1:20 IST
‘ಮದ್ಯ ನಿಷೇಧಿಸುವ ಪ್ರಸ್ತಾವ ಇಲ್ಲ’
‘ಮದ್ಯ ನಿಷೇಧಿಸುವ ಪ್ರಸ್ತಾವ ಇಲ್ಲ’   

ಬೆಂಗಳೂರು: ವರಮಾನ ಸಂಗ್ರಹಕ್ಕಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25 ಸಾವಿರ ಎಕರೆ ಜಮೀನು ನಗದೀಕರಣಗೊಳಿಸುವ ಯಾವುದೇ ಪ್ರಸ್ತಾವ ರಾಜ್ಯ ಸರ್ಕಾರ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆ ಸರಿದೂಗಿಸಲು ರಾಜ್ಯ ಸರ್ಕಾರ, ಜಮೀನು ನಗದೀಕರಣಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ’ ಎಂದು ‘ಪ್ರಜಾವಾಣಿ’ಯಲ್ಲಿ ಇದೇ 18ರಂದು ಪ್ರಕಟವಾಗಿರುವ ವರದಿಗೆ ಸಚಿವಾಲಯ ಸ್ಪಷ್ಟನೆ ನೀಡಿದೆ.  ‘ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದ ಎಲ್ಲ ಕ್ರಮ ಮತ್ತು ಪ್ರಸ್ತಾವಗಳನ್ನು ಆರ್ಥಿಕ ಇಲಾಖೆ ಪರಿಶೀಲಿಸುತ್ತಿದ್ದು, ಸಾರ್ವಜನಿಕರ ಗಮನಕ್ಕೆ ತಂದೇ ಸರ್ಕಾರ ಮುಂದುವರಿಯಲಿದೆ’ ಎಂದೂ ತಿಳಿಸಿದೆ.

‘ನಾಗರಿಕರಿಗೆ ಅನಗತ್ಯವಾಗಿ ಹೊರೆ ಆಗದಂತೆ ಸಂಪನ್ಮೂಲ ಕ್ರೋಡೀಕರಣವನ್ನು ಬಲಪಡಿಸುವುದು ಸರ್ಕಾರದ ಜವಾಬ್ದಾರಿ. ಸಮಾನ ಆರ್ಥಿಕ ಬೆಳವಣಿಗೆಯು ಸ್ಥಿರವಾಗಿರುವಂತೆ ಖಾತ್ರಿ ಪಡಿಸುವುದರ ಜತೆ ಜತೆಗೇ ತ್ವರಿತವಾಗಿ ಆಗುತ್ತಿರುವ ಆರ್ಥಿಕ ಬೆಳವಣಿಗೆಯ ಕೆಲವು ಪ್ರಯೋಜನಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ  ಪಡೆದುಕೊಳ್ಳುವಂತೆ ನೋಡಿಕೊಳ್ಳುವುದಕ್ಕೆ ಸರ್ಕಾರ ಗಮನ ನೀಡುತ್ತಿದೆ. ಈ ದೃಷ್ಟಿಯಲ್ಲಿ ವರಮಾನ ಸಂಗ್ರಹ ಹೆಚ್ಚಿಸುವ ಹಲವು ಕ್ರಮಗಳನ್ನು ಪರಿಗಣಿಸಲಾಗುತ್ತಿದೆ’ ಎಂದೂ ಸಚಿವಾಲಯ ಹೇಳಿದೆ.

ADVERTISEMENT

‘‌ಹೆಚ್ಚುವರಿಯಾಗಿ ತೆರಿಗೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ, ಅಂದರೆ ಗಣಿಗಾರಿಕೆ, ನಗರ ಪ್ರದೇಶಗಳಲ್ಲಿ ಜಾಹೀರಾತು ಅಳವಡಿಕೆ, ಹೆಸರುಗಳ ಹಕ್ಕಿನ ಮಾರಾಟ ಇತ್ಯಾದಿ ಕ್ರಮಗಳಿಂದ ಹೆಚ್ಚಿನ ಆದಾಯ ಗಳಿಸುವ ಅಗಾಧ ಸಾಮರ್ಥ್ಯವನ್ನು ಸರ್ಕಾರ ಹೊಂದಿದೆ. ತೆರಿಗೆ ಸಂಗ್ರಹದ ವ್ಯಾಪ್ತಿ ಹಿಗ್ಗಿಸುವುದು ಕೂಡ ಸರ್ಕಾರದ ಮುಂದಿರುವ ಮತ್ತೊಂದು ಅವಕಾಶ. ಹೀಗೆ ಮಾಡಲಾಗಿರುವ ಶಿಫಾರಸುಗಳಲ್ಲಿ, ಆಯಕಟ್ಟಿನ ಜಾಗವಾಗಿರದ ಭೂಮಿಯನ್ನು ನಗದೀಕರಿಸುವುದು ಕೂಡ ಒಂದಾಗಿದೆ. ಹಾಗೆಂದ ಮಾತ್ರಕ್ಕೆ ಸರ್ಕಾರದ ಭೂಮಿಯನ್ನು ಮಾರಾಟ ಮಾಡಲಾಗುತ್ತದೆ ಎಂದೇನು ಅರ್ಥೈಸಬೇಕಾಗಿಲ್ಲ’ ಎಂದು ಸಚಿವಾಲಯ ಹೇಳಿದೆ.

‘ಅತಿಕ್ರಮಣದ ಅಪಾಯವಿರುವ ಸರ್ಕಾರಿ ಖಾಲಿ ಜಮೀನುಗಳನ್ನು ಮಾರಾಟ ಮಾಡದೆಯೂ ನಿರಂತರವಾಗಿ ಆದಾಯ ತಂದಕೊಡುವಂತೆ ಅಭಿವೃದ್ಧಿಪಡಿಸಬಹುದು. ಸಾರ್ವಜನಿಕ ಭೂಮಿಯನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಬದಲು, ಹಣಕಾಸು ಕ್ರೋಡೀಕರಣದ ನವೀನ ಮತ್ತು ಫಲಪ್ರದವಾದ ಆರ್ಥಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವರಮಾನ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಆರ್ಥಿಕ ಕ್ರೋಡೀಕರಣದ ವಿಧಾನಗಳನ್ನು ಅಧ್ಯಯನ ನಡೆಸಲಾಗುತ್ತಿದ್ದು, ಉತ್ತಮವಾಗಿರುವ ವಿಧಾನವನ್ನು ಅಳವಡಿಸಿಕೊಳ್ಳಲು ಸರ್ಕಾರ ಇಚ್ಛಿಸಿದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸಿ, ದೊಡ್ಡ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಮತ್ತು ನಗರ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿ ಪಡಿಸುವುದರತ್ತ ಗ್ಲೋಬಲ್‌ ಕನ್ಸಲ್ಟಿಂಗ್‌ ಗಮನ ಕೇಂದ್ರೀಕರಿಸಿದೆ’ ಎಂದೂ ಸಚಿವಾಲಯ ತಿಳಿಸಿದೆ.

ಆರ್ಥಿಕ ಇಲಾಖೆಯ ಮುಂದಿರುವ ಪ್ರಸ್ತಾವಗಳ ಪ್ರಾಥಮಿಕ ಮಾಹಿತಿಯನ್ನಷ್ಟೆ ಆಧಾರವಾಗಿ ಇಟ್ಟುಕೊಂಡು, ಆತುರದಿಂದ ಯಾವುದೇ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ ಎಂದೂ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.