ಬೆಂಗಳೂರು: ಆರ್ಥಿಕ ಹಿಂಜರಿತ ಮತ್ತು ಡೀಸೆಲ್ ದರ ಏರಿಕೆಯು ಲಾರಿಗಳ ವಹಿವಾಟಿನ ಮೇಲೂ ಬರ ಸಿಡಿಲಾಗಿ ಎರಗಿದ್ದು, ಇದು ಈ ಬಾರಿಯ ಆಯುಧ ಪೂಜೆ ಸಂಭ್ರಮವನ್ನೂ ಕಸಿದುಕೊಂಡಿದೆ.
ಆಯುಧ ಪೂಜೆ ಎಂದರೆ ಲಾರಿಗಳ ಮಾಲೀಕರು, ಚಾಲಕರು ಮತ್ತು ಕ್ಲೀನರ್‌ಗಳ ಪಾಲಿಗೆ ಸಡಗರದ ದಿನ. ವರ್ಷವಿಡೀ ಹೊಟ್ಟೆ ತುಂಬಿಸುವ ಲಾರಿಗಳನ್ನು ತೊಳೆದು ಪ್ರೀತಿಯಿಂದ ಪೂಜಿಸುವ ದಿನ. ಕೈಗಾರಿಕೆಗಳ ವಹಿವಾಟು ಕುಸಿತಕ್ಕೆ ಕಾರಣವಾಗಿರುವ ಆರ್ಥಿಕ ಹಿಂಜರಿತದ ಪರಿಣಾಮ ಕ್ರಮೇಣ ಲಾರಿ ಮಾಲೀಕರನ್ನೂ ಸುತ್ತಿಕೊಂಡಿದೆ.
ಲಾರಿಗಳ ಚಕ್ರ ಉರುಳಿದರಷ್ಟೇ ಅದನ್ನು ನಂಬಿಕೊಂಡರುವ 2 ಲಕ್ಷ ಕುಟುಂಬಗಳ ಬದುಕಿನ ಚಕ್ರವೂ ಉರುಳುತ್ತದೆ. ಆರ್ಥಿಕ ಹಿಂಜರಿತದ ಜತೆಗೆ ಡೀಸೆಲ್ ದರ ಏರಿಕೆಯೂ ಇವರ ಅಗುಳಿನ ಮೇಲೂ ಬರೆ ಎಳೆದಿದೆ.
‘ನಾಲ್ಕು ತಿಂಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹7 ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಈ ಹಿಂದಿನ ವಹಿವಾಟಿಗೆ ಹೋಲಿಸಿದರೆ ಅರ್ಧದಷ್ಟೂ ಈಗ ಇಲ್ಲ’ ಎನ್ನುತ್ತಾರೆ ಲಾರಿಗಳ ಮಾಲೀಕರು.
‘ಟೋಲ್ ಶುಲ್ಕ ನಮ್ಮ ವಹಿವಾಟಿನ ಮೇಲೆ ಬರೆ ಎಳೆದಿದೆ. ಬೆಂಗಳೂರಿನಿಂದ ಮುಂಬೈಗೆ ಹೋಗಿ ಬರಲು ₹28 ಸಾವಿರ ಶುಲ್ಕ ಕಟ್ಟಬೇಕು. ದೆಹಲಿಗೆ ಹೋಗಿ ಬರಲು ₹60 ಸಾವಿರ ಬೇಕು. ಇಷ್ಟು ಮೊತ್ತದ ಟೋಲ್ ಪಾವತಿಸಿದರೆ ನಾವು ಬದುಕುವುದು ಹೇಗೆ’ ಎಂದು ಲಾರಿ ಮಾಲೀಕರು ಮತ್ತು ಚಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಖಪ್ಪ ಪ್ರಶ್ನಿಸುತ್ತಾರೆ.
‘ಇದೆಲ್ಲದರ ಪರಿಣಾಮ ಲಾರಿ ಮಾಲೀಕರು ವಹಿವಾಟು ಸಂಪೂರ್ಣ ಕುಸಿದು ಹೋಗಿದೆ. ಲಾರಿಗಳನ್ನು ಖರೀದಿಸಲು ಮಾಡಿದ್ದ ಸಾಲವನ್ನು ಕೆಲವರು ಕಳೆದ ಮೂರು ತಿಂಗಳಿಂದ ಪಾವತಿಸಿಲ್ಲ. ಸಾಲದ ತಿಂಗಳ ಕಂತು ಪಾವತಿಸದಿದ್ದರೆ ಲಾರಿಗಳನ್ನು ಬ್ಯಾಂಕ್‌ನವರು ವಶಕ್ಕೆ ಪಡೆಯುತ್ತಾರೆ. ಈ ಎಲ್ಲಾ ಆತಂಕಗಳ ನಡುವೆ ಆಯುಧ ಪೂಜೆ ಬಂದಿದೆ. ಹಬ್ಬದ ಸಂಭ್ರಮದ ಬದಲು ಸಂಕಟವೇ ನಮ್ಮನ್ನು ಕಾಡುತ್ತಿದೆ’ ಎಂದು ಅವರು ಹೇಳಿದರು.
‘ಚಾಲಕರು, ಕ್ಲೀನರ್‌ಗಳಿಗೆ ಸಂಬಳವನ್ನೇ ಕೊಟ್ಟಿಲ್ಲ. ಹೀಗಾಗಿ ಶೇ 60ರಷ್ಟು ಲಾರಿಗಳ ಮಾಲೀಕರು ಹಬ್ಬ ಆಚರಣೆ ಮಾಡಿಲ್ಲ. ದೀಪಾವಳಿ ಸಂದರ್ಭದಲ್ಲಿ ಪೂಜೆ ಮಾಡೋಣ ಎಂಬ ನೆಪ ಹೇಳಿ ಪೂಜೆ ಮುಂದೂಡಿದ್ದೇವೆ’ ಎಂದು ಲಾರಿ ಮಾಲೀಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇದೇ 15ರಂದು ಸಭೆ
‘ಲಾರಿ ಮಾಲೀಕರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೇ 15ರಂದು ಲಾರಿ ಮಾಲೀಕರು ಮತ್ತು ಚಾಲಕರ ಸಭೆ ಕರೆಯಲಾಗಿದೆ’ ಎಂದು ಷಣ್ಮುಖಪ್ಪ ಹೇಳಿದರು.
‘ಈಗಿರುವ ಟೋಲ್‌ಗಳ ಜತೆಗೆ ಹೊಸದಾಗಿ 17 ರಸ್ತೆಗಳಲ್ಲಿ ಟೋಲ್‌ಗಳನ್ನು ರಾಜ್ಯ ಸರ್ಕಾರ ಆರಂಭಿಸುತ್ತಿದೆ. ಇವೆಲ್ಲವೂ ಆರಂಭವಾದರೆ ಲಾರಿಗಳನ್ನು ರಸ್ತೆಗೆ ಇಳಿಸುವುದೇ ಕಷ್ಟವಾಗಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು. ‘ಡೀಸೆಲ್ ದರ ಇಳಿಕೆ, ಟೋಲ್ ಮೊತ್ತ ಕಡಿಮೆ ಮಾಡುವ ಅಥವಾ ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
‘ಸಾಲ ಮರುಪಾವತಿ ಮಾಡದ ಲಾರಿಗಳನ್ನು ವಶಕ್ಕೆ ಪಡೆಯದಂತೆ ಹಣಕಾಸು ಸಂಸ್ಥೆಗಳಿಗೆ ಸಂಘದಿಂದ ಪತ್ರ ಬರೆಯಲಾಗಿದೆ. ಮೂರು ತಿಂಗಳು ಹೆಚ್ಚುವರಿ ಕಾಲವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.