ADVERTISEMENT

ಆನಂದ್ ಸಿಂಗ್‌ ಮೇಲಿನ ಹಲ್ಲೆ ಪ್ರಕರಣ: ‘ಮದ್ಯ ಕುಡಿದು ಬಿದ್ದು ಗಾಯಗೊಂಡರು’

ಶಾಸಕ ಗಣೇಶ್‌ ಜಾಮೀನು ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 18:59 IST
Last Updated 19 ಮಾರ್ಚ್ 2019, 18:59 IST
ಶಾಸಕ ಗಣೇಶ್‌
ಶಾಸಕ ಗಣೇಶ್‌   

ಬೆಂಗಳೂರು: ‘ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಒಂದೂವರೆ ಬಾಟಲಿ ಮದ್ಯ ಕುಡಿದಿದ್ದ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಆಯತಪ್ಪಿ ಟೀಪಾಯ್‌ ಮೇಲೆ ಬಿದ್ದು ಗಾಯಗೊಂಡಿದ್ದರು’ ಎಂದು ಹಲ್ಲೆ ಅರೋಪಕ್ಕೆ ಒಳಗಾಗಿರುವ ಶಾಸಕ ಗಣೇಶ್‌ ಪರ ವಕೀಲ ಸಿ.ಎಚ್‌. ಹನುಮಂತರಾಯ ಇಲ್ಲಿನ ಜನ‍ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದಿಸಿದರು.

‘ಗಣೇಶ್‌ ಅವರ ತಾಯಿ ಮತ್ತು ತಂಗಿ ಬಗ್ಗೆ ಸಿಂಗ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದರಿಂದ ಗಲಾಟೆಶುರುವಾಯಿತು. ಆ ಸಮಯದಲ್ಲಿ ಗಣೇಶ್ ಸ್ವಯಂ ರಕ್ಷಣೆಗೆ ಮುಂದಾದರೆ ವಿನಾ ಹಲ್ಲೆ ನಡೆಸಲಿಲ್ಲ’ ಎಂದೂ ಹನುಮಂತರಾಯ ಹೇಳಿದರು.

‘ಕಣ್ಣಿನ ರಚನೆ 7 ಮೂಳೆಗಳಿಂದ ಆಗಿರುತ್ತದೆ. ಆದರೆ, ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟಿರುವ ಮೆಡಿಕಲ್ ಸರ್ಟಿಫಿಕೇಟಿನಲ್ಲಿ ಯಾವ ಮೂಳೆ ಮುರಿದಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಹೋಟೆಲ್ ಸಿ.ಸಿ ಟಿ.ವಿ ದೃಶ್ಯಗಳನ್ನು ತನಿಖಾ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಅದರಂತೆ ಈ ಘಟನೆ ನಡೆದಿರುವುದು ಭೀಮಾ ನಾಯ್ಕ್ ಅವರ ಕೊಠಡಿಯಲ್ಲಿ ಹೊರತು ಕಾರಿಡಾರ್‌ನಲ್ಲಿ ಅಲ್ಲ’ ಎಂದರು.

ADVERTISEMENT

ಆದರೆ, ‘ಈ ಪ್ರಕರಣದಲ್ಲಿ ಭೀಮಾನಾಯ್ಕ್ ಅವರ ಹೇಳಿಕೆ ದಾಖಲಿಸಿಲ್ಲ. ಗಂಭೀರ ಹಲ್ಲೆ ನಡೆದಿದೆ ಎಂದು ಊಹಿಸಿಕೊಳ್ಳಲಾಗಿದೆ. ಆನಂದ್‌ಸಿಂಗ್‌ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಫೇಸ್‌ ಬುಕ್‌ನಲ್ಲಿ ಅವರ ಕಾರ್ಯಕ್ರಮ, ಪ್ರಯಾಣದ ವಿವರ ಮುಂತಾದ ಮಾಹಿತಿಗಳಿವೆ.ಒಬ್ಬರೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ತಡವಾಗಿ ಎಫ್ಐಆರ್ ದಾಖಲಿಸಲಾಗಿದೆ’ ಎಂದೂ ಅವರು ವಿವರಿಸಿದರು.

‘ನಮ್ಮ ಕಕ್ಷಿಗಾರರಿಗೆ ಜಾಮೀನು ನೀಡಿ’ ಎಂದು ಹನುಮಂತರಾಯ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದ ವಿಚಾರಣೆ ಬುಧವಾರವೂ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.