ಬೆಂಗಳೂರು: ಜಗತ್ಪ್ರಸಿದ್ಧ ಕರಗ ಮಹೋತ್ಸವವು ಈ ಬಾರಿಯೂ ಕಳೆಗುಂದುವ ಸಾಧ್ಯತೆ ಇದೆ. ಕೊರೊನಾ ಎರಡನೇ ಅಲೆ ಪ್ರಾರಂಭವಾಗಿರುವುದರಿಂದ ಉತ್ಸವವನ್ನು ದೇವಸ್ಥಾನದ ಆವರಣಕ್ಕೆ ಸೀಮಿತಗೊಳಿಸುವ ಸಾಧ್ಯತೆ ನಿಚ್ಚಳವಾಗಿದೆ.
ಈ ವರ್ಷಕರಗ ಪೂಜಾ ಕಾರ್ಯಕ್ರಮಗಳು ಏ.18ರಿಂದ ಪ್ರಾರಂಭವಾಗಿ ಏ. 27ಕ್ಕೆ ಪೂರ್ಣಗೊಳ್ಳಬೇಕಿದೆ. ಆದರೆ, ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿತ್ಯ 3,500ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಈ ಬಾರಿಯೂ ಸರಳವಾಗಿ ಕರಗ ಮಹೋತ್ಸವ ನಡೆಯುವ ಸಾಧ್ಯತೆ ಇದೆ.
ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಅರ್ಚಕ ರಾಮಚಂದ್ರ ‘ಈ ಬಾರಿ ದೇವಸ್ಥಾನದ ಮಟ್ಟಿಗೆ ಮತ್ತು ದೇವಸ್ಥಾನದ ಸುತ್ತಮುತ್ತದ ರಸ್ತೆಗೆ ಸೀಮಿತವಾಗುವಂತೆ ಕರಗ ಆಚರಣೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಭೆ ನಾಳೆ: ನಗರದಲ್ಲಿ ಕರಗ ಮಹೋತ್ಸವ ಆಚರಣೆ ಮಾಡುವುದಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಹಾಗೂ ಆಚರಣೆ ಮಾಡಲು ಅವಕಾಶ ಕೊಟ್ಟರೆ ಯಾವ ಕ್ರಮ ಅನುಸರಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸೋಮವಾರ (ಏ.5) ವಿಶೇಷ ಸಭೆ ಕರೆದಿದ್ದಾರೆ.
ಸ್ಥಳೀಯ ಶಾಸಕರು, ಸಂಸದರು ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.