ಮಂಡ್ಯ: ದಿನವೊಂದಕ್ಕೆ ಕೋಟಿ ಲೆಕ್ಕದಲ್ಲಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿರುವ ಬೆಂಗಳೂರು–ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಮೂಲ ಸೌಕರ್ಯಗಳು ಕಲ್ಪಿಸಿಲ್ಲ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಣಕಿ ಬಳಿಯ ಟೋಲ್ ಪ್ಲಾಜಾಗಳಲ್ಲಿ ಈ ಹೆದ್ದಾರಿಯ ಪ್ರಯಾಣಿಕರಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಶೇಷಗಿರಿಹಳ್ಳಿ ಹಾಗೂ ಕಣಮಿಣಕಿ ಕೇಂದ್ರಗಳಲ್ಲಿ 2022ರ ಮಾರ್ಚ್ 14ರಿಂದ ಟೋಲ್ ಸಂಗ್ರಹ ಆರಂಭಗೊಂಡಿದ್ದು, ಗಣಂಗೂರಿನಲ್ಲಿ 2023ರ ಜುಲೈ 1ರಿಂದ ಟೋಲ್ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರಗಳಿಂದ ದಿನವೊಂದಕ್ಕೆ ಸರಾಸರಿ ₹2 ಕೋಟಿ ಶುಲ್ಕ ಸಂಗ್ರಹ ಆಗುತ್ತಿರುವುದಾಗಿ ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.
ಗಣಂಗೂರು ಟೋಲ್ ಪ್ಲಾಜಾಗೆ ‘ಪ್ರಜಾವಾಣಿ’ ಬುಧವಾರ ಭೇಟಿ ನೀಡಿದ ಸಂದರ್ಭ ಅಲ್ಲಿನ ಅವ್ಯವಸ್ಥೆಗಳ ದರ್ಶನವಾಯಿತು. ಹೊರಗೆ ಶೌಚಾಲಯಗಳು ಇವೆ ಎಂದು ದೊಡ್ಡ ಬೋರ್ಡು ತಗುಲಿ ಹಾಕಿದ್ದರೂ ಪ್ರಯಾಣಿಕರಿಗೆ ಬೇಕಿರುವಷ್ಟು ಶೌಚಾಲಯಗಳನ್ನು ನಿರ್ಮಿಸಿಲ್ಲ. ಸದ್ಯ ಹಳೇ ಕಟ್ಟಡದ ಹಿಂಭಾಗದಲ್ಲಿ ಇರುವ ಶೌಚಾಲಯವನ್ನು ಬಳಕೆ ಮಾಡಲಾಗುತ್ತಿದೆ. ಏಕಕಾಲಕ್ಕೆ ಒಬ್ಬರು ಮಾತ್ರ ಇದನ್ನು ಬಳಸಬಹುದಾಗಿದೆ. ಅಲ್ಲಿನ ಕಾರ್ಮಿಕರೇ ಬಳಸಿಕೊಳ್ಳುತ್ತಿದ್ದಾರೆ. ಪ್ರಯಾಣಿಕರಿಗೆಂದು ಪ್ರತ್ಯೇಕ ಶೌಚಾಲಯ ಕಟ್ಟಿಲ್ಲ. ಸ್ವಚ್ಛತೆಯೂ ಅಷ್ಟಕ್ಕಷ್ಟೇ ಎಂಬಂತೆ ಇದೆ.
ಟೋಲ್ ಪ್ಲಾಜಾದಲ್ಲಿ ಹೆಸರಿಗಷ್ಟೇ ಚಿಕಿತ್ಸಾ ಕೊಠಡಿ ಹಾಗೂ ಒಂದು ಹಾಸಿಗೆ ಇದೆ. ಆದರೆ ವೈದ್ಯರು ಲಭ್ಯವಿಲ್ಲ. ಒಬ್ಬರು ನರ್ಸ್ ಇರುವುದಾಗಿ ಟೋಲ್ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ. ಆದರೆ ಬುಧವಾರ ಅವರೂ ಕೇಂದ್ರದಲ್ಲಿ ಇರಲಿಲ್ಲ. ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳೂ ಅಲ್ಲಿಲ್ಲ. ಒಂದು ಆಂಬುಲೆನ್ಸ್ ಮಾತ್ರ ಇದೆ.
ಪ್ರಯಾಣಿಕರಿಗೆ ಅವಶ್ಯವಾದ ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳು ಈ ಕೇಂದ್ರದಲ್ಲಿ ಇಲ್ಲ. ವಿಶ್ರಾಂತಿ ಪಡೆಯಬಯಸುವವರಿಗೆ ನೆರಳು ಸಿಗುವುದಿಲ್ಲ. ವಾಹನಗಳ ಟೋಯಿಂಗ್ ಸೇರಿದಂತೆ ಯಾವೊಂದು ವ್ಯವಸ್ಥೆಗಳನ್ನೂ ಹೆದ್ದಾರಿ ಪ್ರಾಧಿಕಾರ ಕಲ್ಪಿಸಿಲ್ಲ. ಸರ್ವೀಸ್ ರಸ್ತೆ ಅಕ್ಕಪಕ್ಕ ಹೋಟೆಲ್‌ಗಳು ಸಿಗುತ್ತವಾದರೂ ಆರು ಪಥಗಳ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣಿಸುವವರಿಗೆ ಆ ಸೌಲಭ್ಯವೂ ಇಲ್ಲ.
ಹೆದ್ದಾರಿ ಟೋಲ್ ಶುಲ್ಕ ಈಗಾಗಲೇ ಒಮ್ಮೆ ಹೆಚ್ಚಳವಾಗಿದೆ. ಆದರೆ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಮಾತ್ರ ಹೆದ್ದಾರಿ ಪ್ರಾಧಿಕಾರ ಆಸಕ್ತಿ ತೋರುತ್ತಿಲ್ಲ ಎನ್ನುವುದು ಈ ಮಾರ್ಗದಲ್ಲಿ ಪ್ರಯಾಣಿಸುವವರ ದೂರು.
‘ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರಬೇಕಾದರೆ ಒಂದು ಕಾರಿಗೆ ₹550–600 ಟೋಲ್ ಕಟ್ಟಬೇಕು. ಬೇರೆ ಯಾವ ಟೋಲ್‌ಗಳಲ್ಲಿಯೂ ಇಷ್ಟು ದುಬಾರಿ ಶುಲ್ಕ ಇಲ್ಲ. ಆದರೆ ಅದಕ್ಕೆ ತಕ್ಕಂತೆ ಪ್ರಯಾಣಿಕರಿಗೆ ಸೇವೆಗಳು ಸಿಗುತ್ತಿಲ್ಲ. ರಸ್ತೆ ಉತ್ತಮವಾಗಿದೆ ಎನ್ನುವುದನ್ನು ಬಿಟ್ಟರೆ ಇನ್ನುಳಿದ ಸೌಕರ್ಯಗಳು ಇಲ್ಲ’ ಎನ್ನುತ್ತಾರೆ ಮೈಸೂರಿನ ಪ್ರಯಾಣಿಕರಾದ ಶಂಕರ್.
ಈ ಕುರಿತು ಪ್ರತಿಕ್ರಿಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ರಾಜ್ಯದಲ್ಲೇ ಅತಿಹೆಚ್ಚು ಟೋಲ್ ವಸೂಲಿ ಮಾಡುತ್ತಿರುವ ಬೆಂಗಳೂರು–ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಕುಡಿಯುವ ನೀರು ಸಿಗುವುದಿಲ್ಲ. ರಸ್ತೆ ಬದಿಯಲ್ಲಿ ಹೋಟೆಲ್ ಶೌಚಾಲಯಗಳ ವ್ಯವಸ್ಥೆ ಇಲ್ಲ- ಶಂಕರ್, ಪ್ರಯಾಣಿಕ
ಗಣಂಗೂರು ಟೋಲ್‌ನಲ್ಲಿ ತುರ್ತು ಚಿಕಿತ್ಸೆಗಾಗಿ ನರ್ಸ್ ಒಬ್ಬರನ್ನು ನಿಯೋಜಿಸಲಾಗಿದೆ. ವೈದ್ಯರ ಸೇವೆ ಇಲ್ಲ. ತುರ್ತು ಸಂದರ್ಭಕ್ಕೆಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ- ಟೋಲ್ ಸಿಬ್ಬಂದಿ, ಗಣಂಗೂರು ಟೋಲ್ ಪ್ಲಾಜಾ
ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುವವರನ್ನು ಸುಲಿಗೆ ಮಾಡುವ ಪ್ರಕರಣಗಳು ಈಚೆಗೆ ವರದಿ ಆಗುತ್ತಿವೆ. ಟೋಲ್‌ಗಳ ಸಮೀಪ ಲಾರಿ ಟ್ರಕ್ ಸೇರಿದಂತೆ ಭಾರಿ ವಾಹನಗಳ ಚಾಲಕರಿಗೆ ವಿಶ್ರಾಂತಿಗಾಗಿ ಟರ್ಮಿನಲ್‌ಗಳನ್ನು ನಿರ್ಮಿಸಬೇಕು. ಅಲ್ಲಿ ಹೋಟೆಲ್ ಸ್ನಾನಗೃಹ ಸೇರಿದಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ. ರಾಮನಗರ ಹಾಗೂ ಚನ್ನಪಟ್ಟಣ ನಡುವೆ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ನಡುಗಡ್ಡೆ ಮಾದರಿಯಲ್ಲಿ 50 ಎಕರೆ ಪ್ರದೇಶದಲ್ಲಿ ಕೆಫೆಟೇರಿಯಾ ಹಾಗೂ ವಿಶ್ರಾಂತಿಧಾಮ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರವು ಯೋಜಿಸಿದೆಯಾದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.