ಬೆಂಗಳೂರು:ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದ ಪುನರ್‌ರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆಯಾದರೂ, ಸದ್ಯಕ್ಕೆ ಅದು ಈಡೇರುವ ಸಾಧ್ಯತೆ ಇಲ್ಲ.
ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಮಾಡುವ ಬಗ್ಗೆ ಬಿಜೆಪಿ ವರಿಷ್ಠರು ಸದ್ಯವೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಚರ್ಚೆ ವಿಜಯನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಶುರುವಾಗಿದೆ. ‘ಈ ತಿಂಗಳಕೊನೆಯ ವಾರ ಅಥವಾ ಮೇ ಮೊದಲ ವಾರದೊಳಗೆ ಪುನರ್‌ರಚನೆ ಕಸರತ್ತು ಪೂರ್ಣಗೊಳ್ಳಲಿದೆ’ ಎಂದು ಪಕ್ಷದ ಒಂದು ಗುಂಪು ಪ್ರತಿಪಾದಿಸುತ್ತಿದೆ.
‘ಪಕ್ಷ ಎದುರಿಸುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಅಂತಹ ಸಾಧ್ಯತೆ ವಿರಳ’ ಎಂಬುದು ಮತ್ತೊಂದು ಗುಂಪಿನ
ಅಭಿಪ್ರಾಯವಾಗಿದೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ,‘ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದೆಹಲಿಯಲ್ಲಿ ವಿಶೇಷ ಸಭೆಯನ್ನು ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ನಂತರ ದೆಹಲಿಗೆ ಬರುವಂತೆ ನಡ್ಡಾ ನನಗೆ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನರ್‌ರಚನೆಯೋ ಎಂಬುದು ಅಲ್ಲಿಯೇ ತೀರ್ಮಾನ ಆಗಲಿದೆ’ ಎಂದರು.
‘ದೆಹಲಿ ಸಭೆಗೆ ಸಮಯ ನಿಗದಿಯಾದ ಬಳಿಕವಷ್ಟೇ ಸಂಪುಟ ಪುನರ್‌ರಚನೆಯ ಪ್ರಕ್ರಿಯೆಗೆ ಚಾಲನೆ ಸಿಗಬಹುದು. ಸಂಪುಟದಲ್ಲಿ ಖಾಲಿ ಇರುವ ಐದು ಸಚಿವ ಸ್ಥಾನಗಳ ಜತೆಗೆ ಇನ್ನೂ ಐವರು ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಒಟ್ಟು 10 ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಚಿಂತನೆ ನಡೆದಿದೆ’ ಎಂದೂ ಬಿಜೆಪಿ ಮೂಲಗಳು ಹೇಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.