ADVERTISEMENT

ಅಕ್ಕಿ ಅಧಿಪತ್ಯದಲ್ಲಿ ರಾಗಿ, ಜೋಳ ಅನಾಥ !

ರೋಗ ನಿರೋಧಕ ಶಕ್ತಿ ಹೆಚ್ಚಳ * ರೈತರ–ಕಾರ್ಮಿಕರ ಹಿತರಕ್ಷಣೆ

ಗುರು ಪಿ.ಎಸ್‌
Published 26 ಏಪ್ರಿಲ್ 2020, 16:02 IST
Last Updated 26 ಏಪ್ರಿಲ್ 2020, 16:02 IST
ರೈತರು ರಾಗಿಯ ಕಣಗಳನ್ನು ಗಾಳಿಗೆ ತೂರುತ್ತಿರುವುದು ( ಪ್ರಜಾವಾಣಿ ಚಿತ್ರ)
ರೈತರು ರಾಗಿಯ ಕಣಗಳನ್ನು ಗಾಳಿಗೆ ತೂರುತ್ತಿರುವುದು ( ಪ್ರಜಾವಾಣಿ ಚಿತ್ರ)   

ಬೆಂಗಳೂರು:ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವವರಿಗೆ ಉಚಿತವಾಗಿ ಹಂಚುತ್ತಿರುವ ಅಕ್ಕಿಯ ಜೊತೆಗೆ ಜೋಳ, ರಾಗಿಯನ್ನೂ ವಿತರಿಸಿದರೆ ಜನರಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ರೈತರ ಬೆಳೆಗಳಿಗೆ ಮಾರುಕಟ್ಟೆ ಲಭಿಸಿದಂತಾಗುತ್ತದೆಯಲ್ಲದೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯೂ ತಪ್ಪುತ್ತದೆ ಎನ್ನುತ್ತಾರೆ ಕೃಷಿ ತಜ್ಞರು.

‘ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ ಇವರ ಸಂಖ್ಯೆ 6 ಲಕ್ಷ ಇದೆ. ಈ ಕಾರ್ಮಿಕರು ಬೇರೆ ಬೇರೆ ಆಹಾರ ಸಂಸ್ಕೃತಿ ಹೊಂದಿದ್ದಾರೆ. ದಕ್ಷಿಣದವರಿಗೆ ರಾಗಿ, ಉತ್ತರದವರಿಗೆ ಜೋಳ ನೀಡಿದರೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆಯಲ್ಲದೆ, ಅಲ್ಲಿನ ರೈತರ ಹಿತವನ್ನೂ ಕಾಯ್ದಂತಾಗುತ್ತದೆ’ ಎನ್ನುತ್ತಾರೆ ಸಾವಯವ ಕೃಷಿ ಕಾರ್ಯಕರ್ತೆ ವಿ. ಗಾಯತ್ರಿ.

ತಪ್ಪಲಿದೆ ಹೊರೆ:‘ಆಹಾರ ಭದ್ರತಾ ಕಾಯ್ದೆ 2019ರ ಪ್ರಕಾರ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪ್ರತಿ ಕೆಜಿ ಅಕ್ಕಿಗೆ ₹3, ರಾಗಿ ಅಥವಾ ಜೋಳಕ್ಕೆ ₹1ರಂತೆ ಕೊಡುತ್ತದೆ. ಈಗ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೆಜಿಗೆ ₹3 ನಷ್ಟವಾದಂತಾಗುತ್ತದೆ. ಇದರ ಬದಲು ರಾಗಿ ಅಥವಾ ಜೋಳ ವಿತರಿಸಿದರೆ ಕೆಜಿಗೆ ₹2 ಬೊಕ್ಕಸಕ್ಕೆ ಉಳಿದಂತಾಗುತ್ತದೆ ಅಥವಾ ಒಂದು ಕೆಜಿ ಅಕ್ಕಿ ಬದಲು ಮೂರು ಕೆಜಿ ರಾಗಿ ಅಥವಾ ಜೋಳ ವಿತರಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಕೃಷಿ ಆರ್ಥಿಕ ತಜ್ಞ ಪ್ರಕಾಶ ಕಮ್ಮರಡಿ.

ADVERTISEMENT

‘ರಾಗಿಯ ಬೆಲೆ ಜಾಸ್ತಿ ಇದ್ದರೂ ರಾಜ್ಯ ಸರ್ಕಾರಕ್ಕೆ ನಷ್ಟವಾಗುವುದಿಲ್ಲ. ಏಕೆಂದರೆ, ಬೆಂಬಲ ಬೆಲೆಯನ್ನು ಸಂಪೂರ್ಣ ಭರಿಸುವುದು ಕೇಂದ್ರ ಸರ್ಕಾರ’ ಎಂದು ಅವರು ಹೇಳುತ್ತಾರೆ.

‘ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಇದನ್ನು ಖರೀದಿಸಲು ಅವಕಾಶ ಮಾಡಿಕೊಡಿ ಎಂದು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಈ ಮೊತ್ತವನ್ನು ನಂತರ ಕೇಂದ್ರದಿಂದ ಪಡೆಯಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ಹೆಚ್ಚು ಇಳುವರಿ:

‘ನಮ್ಮ ಭಾಗದಲ್ಲಿ ಶೇ 80ರಷ್ಟು ಜನ ರಾಗಿ ಬೆಳೆದಿದ್ದಾರೆ. ಎಕರೆಗೆ 16ರಿಂದ 20 ಚೀಲದವರೆಗೆ ಬೆಳೆ ಬಂದಿದೆ. ಕೆಜಿಗೆ ₹30.50ಯಂತೆ ಕೊಡಲು ರೈತರು ಸಿದ್ಧರಿದ್ದಾರೆ’ ಎನ್ನುತ್ತಾರೆ ಮಾಗಡಿಯ ರೈತ ಗಂಗಯ್ಯ.

‘ವಿಜಯಪುರ ಜಿಲ್ಲೆಯಲ್ಲೂ ಈ ಬಾರಿ ಜೋಳದ ಬೆಳೆ ಚೆನ್ನಾಗಿ ಬಂದಿದೆ. ಎಕರೆಗೆ ಸರಾಸರಿ 8ಚೀಲದಿಂದ 10 ಚೀಲ ಬೆಳೆಯುತ್ತಿದ್ದಾರೆ. ಕೆಜಿಗೆ ₹32ರಿಂದ ₹35ರಂತೆ ಸರ್ಕಾರವೇ ಖರೀದಿಸಿದರೆ ಅನುಕೂಲವಾಗುತ್ತದೆ’ ಎಂದು ವಿಜಯಪುರದ ರೈತ ಮಲ್ಲಿಕಾರ್ಜುನ ಕುಂಬಳ ಹೇಳಿದರು.

‘ಈ ಬಾರಿ ಹಿಂಗಾರು ಮಳೆ ಚೆನ್ನಾಗಿ ಆಗಿರುವುದರಿಂದ ರಾಗಿ ಇಳುವರಿಯೂ ಹೆಚ್ಚು ಬಂದಿದೆ. ಜಿಲ್ಲೆಯಿಂದಲೇ ಸುಮಾರು ಸಾವಿರ ಟನ್‌ವರೆಗೆ ರಾಗಿ ಪೂರೈಸಲು ರೈತರು ಸಿದ್ಧರಿದ್ದಾರೆ’ ಎನ್ನುತ್ತಾರೆ ಬಳ್ಳಾರಿಯ ರೈತ ಕೋಗಳಿ ಕೊಟ್ರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.