ADVERTISEMENT

ಕೊರೊನಾ ಅಪಾಯ | ದ್ವಿತೀಯ ಪಿಯು ಮೌಲ್ಯಮಾಪನ: ವಿಕೇಂದ್ರೀಕರಣಗೊಳ್ಳದೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 12:17 IST
Last Updated 23 ಮೇ 2020, 12:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ಪಿಯು ಮೌಲ್ಯಮಾಪನ ಕೇಂದ್ರಗಳನ್ನು ಈ ಬಾರಿ ವಿಕೇಂದ್ರೀಕರಣಗೊಳಿಸಲಾಗುವುದು ಎಂಬ ಸರ್ಕಾರದ ಭರವಸೆ ಕಾರ್ಯರೂಪಕ್ಕೆ ಬರದೆ ಇರುವುದರಿಂದ ಹಲವು ಉಪನ್ಯಾಸಕರು ಆತಂಕಗೊಂಡಿದ್ದಾರೆ.

‘ಇತರ ಜಿಲ್ಲೆಯವರಿಗೆ ಮೌಲ್ಯಮಾಪನ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ ಇರುವ ಮೌಲ್ಯಮಾಪಕರಿಗೆ ವಿಪರೀತ ಹೊರೆ ಬೀಳುತ್ತದೆ. ಕಾಯಿಲೆಯಿಂದ ಬಳಲುತ್ತಿರುವ ಮಧ್ಯಮಯಸ್ಕರಿಗೆ ಕೊರೊನಾ ಸೋಂಕು ತಗುಲುವ ಅಪಾಯ ಇದೆ. ಇದು ಬಹಳ ಅಪಾಯಕಾರಿಯಾಗಬಹುದು’ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಹೇಳಿದರು.

‘ಈಗಾಗಲೇ ಆರಂಭವಾಗಿರುವ ಅರ್ಥಶಾಶ್ತ್ರ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಎಂಟು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದು ಉತ್ತಮ ಬೆಳವಣಿಗೆ. ಶಿಕ್ಷಣ ಸಚಿವರು ತಿಳಿಸಿದಂತೆ ಪಿಸಿಎಂಬಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬೆಂಗಳೂರಿನಲ್ಲೇ ನಡೆಯಲಿ. ಇತರ ಉತ್ತರ ಪತ್ರಿಕೆಗಳನ್ನು ವಿವಿಧ ಜಿಲ್ಲೆಗಳಿಗೆ ವಿಂಗಡಿಸಿ ಮೌಲ್ಯಮಾಪನ ಆಗುವಂತೆ ನೋಡಿಕೊಳ್ಳಬೇಕಿತ್ತು’ಎಂದು ಅವರು ಹೇಳಿದರು.

ADVERTISEMENT

‘ಜೂನ್‌ 18ರವರೆಗೆ ಈಗಾಗಲೇ ರೂಪಿಸಿದಂತೆ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಮುಂದುವರಿಸುವ ವಿಚಾರ ಮಾಡಲಾಗಿದೆ.. ಮೌಲ್ಯಮಾಪಕರ ಸಂಖ್ಯೆ ಕಡಿಮೆಯಾಗಿ ವಿಳಂಬವಾಗುವ ಲಕ್ಷಣ ಇದ್ದರೆ ಇತರ ಜಿಲ್ಲೆಗಳಿಗೆ ವಿಸ್ತರಿಸುವುದು ಕಷ್ಟವಲ್ಲ ಎಂಬ ನೆಲೆಯಲ್ಲಿ ಸದ್ಯ ಕಾದುನೋಡುವ ತಂತ್ರ ಅನುಸರಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ಸ್ಯಾನಿಟೈಸರ್ ಕೊಡುವುದಿಲ್ಲ
ಮೌಲ್ಯಮಾಪನ ಕೇಂದ್ರಗಳಿಗೆ ಬರುವವರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕೆಲವೊಂದು ಮಾರ್ಗಸೂಚಿಗಳು ರವಾನೆಯಾಗಿದ್ದು, ಮುಖಗವಸು, ಸ್ಯಾನಿಟೈಸರ್‌ಗಳನ್ನು ನೀಡುವ ಪ್ರಸ್ತಾಪವೇ ಇಲ್ಲ. ಇದೀಗ ಶೇಷಾದ್ರಿಪುರ ಕಾಲೇಜಿನಲ್ಲಿ ಅರ್ಥಶಾಸ್ತ್ರ ‍ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುತ್ತಿರುವವರಿಗೆ ಸ್ಯಾನಿಟೈಸರ್‌ ಸಹಿತ ಯಾವುದೇ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ. ಪಿಯು ಉಪನ್ಯಾಸಕ ಸಂಘದವರೇ ಅವುಗಳನ್ನು ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.