ನವದೆಹಲಿ: 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಕರ್ನಾಟಕ ರಾಜ್ಯಕ್ಕೆ ಭಾಗಶಃ ಅನುದಾನವಷ್ಟೇ ಬಿಡುಗಡೆಯಾಗಿದೆ. ಇನ್ನೂ ₹11,826 ಕೋಟಿ ಬಿಡುಗಡೆಯಾಗಬೇಕಿದೆ.
2021ರಿಂದ 2026ರ ಅವಧಿಗೆ ₹55,754 ಕೋಟಿ ಅನುದಾನವನ್ನು (ಸ್ಥಳೀಯ ಸಂಸ್ಥೆ, ವಿಪತ್ತು ನಿರ್ವಹಣೆ ಹಾಗೂ ಸಹಾಯಾನುದಾನ) ಕರ್ನಾಟಕಕ್ಕೆ ಬಿಡುಗಡೆ ಮಾಡಲು ಆಯೋಗ ಶಿಫಾರಸು ಮಾಡಿತ್ತು. ಈ ವರೆಗೆ ₹39,704 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ತೆರಿಗೆ ಪಾಲು ಹಂಚಿಕೆಯ ಬಳಿಕ ಆದಾಯ ಕೊರತೆ ಅನುದಾನವೂ (1,631 ಕೋಟಿ) ಸೇರಿದೆ. ಈ ಅನುದಾನವನ್ನು ಕೇಂದ್ರ ಸರ್ಕಾರ 2021–22ನೇ ಆರ್ಥಿಕ ವರ್ಷದಲ್ಲೇ ಬಿಡುಗಡೆಗೊಳಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ₹21,877 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಈ ವರೆಗೆ ರಾಜ್ಯಕ್ಕೆ ಬಂದಿರುವುದು ₹10,051 ಕೋಟಿ ಮಾತ್ರ. ₹27,877 ಕೋಟಿ ಸಹಾಯಾನುದಾನಕ್ಕೆ ಆಯೋಗ ಶಿಫಾರಸು ಮಾಡಿತ್ತು. ಇಲ್ಲಿಯವರೆಗೆ ₹19,852 ಕೋಟಿಯನ್ನು ಕೇಂದ್ರ ಕೊಟ್ಟಿದೆ.
ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸದ ಕಾರಣಕ್ಕೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದು ಕೇಂದ್ರದ ಸಮಜಾಯಿಷಿ. ‘ಸಂವಿಧಾನದ 243 ಇ ವಿಧಿಯ ಅಡಿಯ ಪ್ರಕಾರ, ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರಗಳ ಹೊಣೆ. ಚುನಾವಣೆ ನಡೆಸಲು ಅಡ್ಡಿಯಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹಲವು ಸಲ ಸಲಹೆ ನೀಡಲಾಗಿತ್ತು. ಆದರೂ, ರಾಜ್ಯ ಸರ್ಕಾರ ಈವರೆಗೆ ಚುನಾವಣೆ ನಡೆಸಿಲ್ಲ. ಉಳಿದ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಕಿ ಅನುದಾನ ನೀಡಲಾಗುತ್ತದೆ’ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
‘ಆಯೋಗದ ಶಿಫಾರಸಿನ ಪ್ರಕಾರ, ಸಹಾಯನುದಾನವನ್ನು ವರ್ಷವಾರು ಬಿಡುಗಡೆ ಮಾಡಲಾಗಿದೆ. ನೋಡಲ್ ಸಚಿವಾಲಯಗಳ ಶಿಫಾರಸು ಹಾಗೂ ನಿಗದಿಪಡಿಸಿದ ಷರತ್ತುಗಳ ಅನ್ವಯ ರಾಜ್ಯಗಳಿಗೆ ಅನುದಾನ ವರ್ಗಾಯಿಸಲಾಗಿದೆ. ಯಾವುದೇ ರಾಜ್ಯಕ್ಕೆ ಸಹಾಯಾನುದಾನ ಬಾಕಿ ಇಲ್ಲ’ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.