ಬೆಂಗಳೂರು: ‘ಈ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೃಪಾಂಕ ನೀಡುವ ವ್ಯವಸ್ಥೆ ಇರುವುದಿಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕೋವಿಡ್ ಅವಧಿಯಲ್ಲಿನ ಕಲಿಕಾ ನಷ್ಟ ಸರಿದೂಗಿಸಲು ಕೃಪಾಂಕ ನೀಡುವ ಪದ್ಧತಿ ಆರಂಭಿಸಲಾಗಿತ್ತು. 2023ರಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಮೊದಲ ಬಾರಿ ವೆಬ್‌ಕಾಸ್ಟಿಂಗ್ ಪರಿಚಯಿಸಿದ ಕಾರಣ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಫಲಿತಾಂಶದಲ್ಲೂ ಏರುಪೇರಾಗಿತ್ತು. ಹಾಗಾಗಿ, ಕೃಪಾಂಕ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೆವು ಎಂದು ವಿವರಿಸಿದರು.
ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದಾಗಿ ಪರೀಕ್ಷಾ ನಕಲಿಗೆ ಅವಕಾಶ ಇಲ್ಲವಾಗಿದೆ. ವಿದ್ಯಾರ್ಥಿಗಳಲ್ಲೂ ಆತ್ಮಸ್ಥೈರ್ಯ ಮೂಡಿದೆ. ಪರೀಕ್ಷಾ ಸುಧಾರಣೆಗಳ ಬಗ್ಗೆ ಭಯ ಹೋಗಲಾಡಿಸಲಾಗಿದೆ. ಕಲಿಕಾ ಗುಣಮಟ್ಟ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸನ್ನದ್ಧಗೊಳಿಸಲಾಗುತ್ತಿದೆ. ಈ ಬಾರಿ ಕೃಪಾಂಕದ ನೆರವಿಲ್ಲದೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುವ ವಿಶ್ವಾಸವಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೃಪಾಂಕ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ವ್ಯವಸ್ಥೆ ರದ್ದು ಮಾಡುವಂತೆ ಸೂಚಿಸಿದ್ದರು.
2023ರ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನದ ನಂತರ ಫಲಿತಾಂಶ ಶೇ 53ರಷ್ಟಿತ್ತು. ಹಾಗಾಗಿ, ಶಾಲಾ ಶಿಕ್ಷಣ ಇಲಾಖೆ ಕೃಪಾಂಕ ನಿಯಮದಲ್ಲಿ ಸಡಿಲಿಕೆ ಮಾಡಿತ್ತು. ಕೃಪಾಂಕ ಪಡೆಯಲು ಇದ್ದ ಶೇ 35 ಅರ್ಹ ಅಂಕಗಳನ್ನು 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಗಿತ್ತು. ಇದರಿಂದ ಒಟ್ಟಾರೆ ಫಲಿತಾಂಶ ಶೇ 73.40ಕ್ಕೆ ಹಿಗ್ಗಿತ್ತು. ಕೃಪಾಂಕ ನೀಡದೆ ಇದ್ದಿದ್ದರೆ ಕಳೆದ ಬಾರಿಗಿಂತ (2023ರ ಫಲಿತಾಂಶ ಶೇ 83.89) ಶೇ 30ರಷ್ಟು ಫಲಿತಾಂಶ ಕುಸಿತವಾಗುತ್ತಿತ್ತು. ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಕೃಪೆಯಿಂದ ತೇರ್ಗಡೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.