ಬೆಂಗಳೂರು: ‘ಅವೈಜ್ಞಾನಿಕ ಹಾಗೂ ವಾಸ್ತವಕ್ಕೆ ದೂರವಿರುವ ಜಾತಿಗಣತಿ ವರದಿಯನ್ನು ರಾಜಕೀಯ ದುರುದ್ದೇಶದಿಂದ ಸರ್ಕಾರ ಅನುಷ್ಠಾನಗೊಳಿಸಲು ಮುಂದಾದರೆ ರಾಜ್ಯದಾದ್ಯಂತ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಸಿದೆ.
‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ನಡೆಸಿರುವ ಜಾತಿಗಣತಿಯನ್ನು ಸರ್ಕಾರ ಜಾರಿಗೆ ತರಬಾರದು. ವೈಜ್ಞಾನಿಕವಾಗಿ ಎಲ್ಲ ಸಮುದಾಯಗಳಿಗೆ ಅನುಕೂಲವಾಗುವಂತೆ ಎಲ್ಲ ಜನವಸತಿಗಳಿಗೆ ಭೇಟಿ ನೀಡಿ ಮರುಸಮೀಕ್ಷೆ ನಡೆಸಬೇಕು’ ಎಂದು ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದ್ದಾರೆ.
‘ಜಾತಿಗಣತಿ ವರದಿ ಅನುಷ್ಠಾನದಿಂದ ಯಾವುದೇ ಜನಾಂಗಕ್ಕೆ ಅನನುಕೂಲವಾಗಬಾರದು ಎಂಬುದು ನಮ್ಮ ಉದ್ದೇಶ. ಈಗಿರುವ ಜಾತಿಗಣತಿ ವರದಿಯನ್ನು 10 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಈ ವರದಿಯನ್ನು ಈಗಾಗಲೇ ಹಲವು ಸಮುದಾಯಗಳು ಹಾಗೂ ಸಂಘ–ಸಂಸ್ಥೆಗಳೂ ವಿರೋಧಿಸಿವೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಎಲ್ಲ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಕೆಲವರು ಹಾಗೂ ಕೆಲವು ಸಂಘಟನೆಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ಒಂದು ವೇಳೆ ಹಟಕ್ಕೆ ಬಿದ್ದು ಅವೈಜ್ಞಾನಿಕ ವರದಿಯನ್ನೇ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾದರೆ ನಮ್ಮ ಸಂಘದ ನೇತೃತ್ವದಲ್ಲಿ ಇತರೆ ಸಂಘ–ಸಂಸ್ಥೆಗಳ ಜೊತೆಗೂಡಿ ಹೋರಾಟ ನಡೆಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.