ಬೆಂಗಳೂರು: ‘ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದು ತಪ್ಪು ಮಾಹಿತಿ. ಈ ಸಂಬಂಧ ರಾಜ್ಯ ಸರ್ಕಾರ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜೆಟ್ ಭಾಷಣದಲ್ಲಿ ಎಲ್ಲ ರಾಜ್ಯಗಳ ಹೆಸರನ್ನು ಹೇಳಲಾಗುವುದಿಲ್ಲ. ಹಾಗೆಂದು, ಹೆಸರು ಹೇಳದೇ ಇರುವ ರಾಜ್ಯಗಳಿಗೆ ಏನೂ ನೀಡಿಲ್ಲ ಎಂದಲ್ಲ. ಈ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಮತ್ತು ಯೋಜನೆಗಳಿಂದ ಬೆಂಗಳೂರು ಮತ್ತು ಕರ್ನಾಟಕಕ್ಕೆ ಗರಿಷ್ಠ ಮಟ್ಟದ ಪ್ರಯೋಜನ ಸಿಗುತ್ತದೆ’ ಎಂದರು.
‘ಬಾಹ್ಯಾಕಾಶ ಸಂಶೋಧನೆ ಮತ್ತು ಆ ಕ್ಷೇತ್ರದ ನವೋದ್ಯಮಗಳಿಗೆ ಸಾವಿರ ಕೋಟಿ ಘೋಷಿಸಲಾಗಿದೆ. ಇಸ್ರೊ ಮತ್ತು ಅದರ ಅಂಗಸಂಸ್ಥೆಗಳು, ಈ ಕ್ಷೇತ್ರದ ನವೋದ್ಯಮಗಳು ಬೆಂಗಳೂರಿನಲ್ಲೇ ಕೇಂದ್ರಿತವಾಗಿವೆ. ಇದರಿಂದ ಬೆಂಗಳೂರಿಗೆ ಲಾಭವಾಗಲಿದೆ. ಮೆಟ್ರೊ ನಗರಗಳಲ್ಲಿ ವಸತಿ ಯೋಜನೆ, ಹೆದ್ದಾರಿ ಯೋಜನೆ, ಬೆಂಗಳೂರು ಫೆರಿಪೆರಲ್ ವರ್ತುಲ ರಸ್ತೆ, ಮೆಟ್ರೊ ನಗರಗಳಲ್ಲಿ ದುಡಿಯುವ ಮಹಿಳೆಯರಿಗಾಗಿ ವಸತಿನಿಲಯ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್‌ಗಳನ್ನು ಪ್ರಕಟಿಸಲಾಗಿದೆ. ಇವೆಲ್ಲದರ ಪ್ರಯೋಜನ ಬೆಂಗಳೂರಿಗೆ ಸಿಗಲಿದೆ’ ಎಂದರು.
‘ಕೇಂದ್ರ ಬಜೆಟ್‌ನಲ್ಲಿ ಎಂಎಸ್‌ಎಂಇಗಳಿಗೆ ಹಲವು ಆರ್ಥಿಕ ನೀತಿಗಳನ್ನು ಘೋಷಿಸಲಾಗಿದೆ. ಯಂತ್ರೋಪಕರಣಗಳ ಖರೀದಿಗಾಗಿ ಸರ್ಕಾರದ ಭದ್ರತೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ಸಾಲ ನೀಡಲಿವೆ. ಎಂಎಸ್‌ಎಂಇಗಳು ಸಾಲ ತೀರಿಸುವಲ್ಲಿ ವಿಫಲವಾದಾಗ, ಅವುಗಳ ಬ್ಯಾಂಕ್ ವಹಿವಾಟು ಸ್ಥಗಿತವಾಗುವುದನ್ನು ತಡೆಯಲು ವಿಶೇಷ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಅವುಗಳ ನಿರ್ವಹಣೆಗೆ ಕೈಗಾರಿಕಾ ಪ್ರದೇಶದಲ್ಲಿ, ಉದಾಹರಣೆಗೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಾಣಿಜ್ಯ ಬ್ಯಾಂಕ್‌ಗಳ ಪ್ರತ್ಯೇಕ ಶಾಖೆಗಳನ್ನು ತೆರೆಯಲಾಗುವುದು. ಈ ಎಲ್ಲ ಯೋಜನೆಗಳ ಪ್ರಯೋಜನ ಕರ್ನಾಟಕಕ್ಕೂ ದೊಡ್ಡಮಟ್ಟದಲ್ಲಿ ಸಿಗಲಿದೆ’ ಎಂದರು.
ನಮ್ಮ ಸರ್ಕಾರ ಇದ್ದಾಗ ರಾಜ್ಯದಲ್ಲಿ ಉಳಿತಾಯ ಬಜೆಟ್ ಇತ್ತು. ಈಗ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ವೆಚ್ಚ ಮಾಡಿ ಕೊರತೆ ಬಜೆಟ್ ಆಗುತ್ತಿದೆ. ರಾಜ್ಯದ ಸಾಲ ಮಿತಿಮೀರಿದೆನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ
‘ಯುಪಿಎಗಿಂತ ಹೆಚ್ಚು ತೆರಿಗೆ ಪಾಲು ನೀಡುತ್ತಿದ್ದೇವೆ’
‘2004–14ರ ನಡುವೆ ಯುಪಿಎ ಸರ್ಕಾರವು ತನ್ನ ತೆರಿಗೆ ವರಮಾನದಲ್ಲಿ ಕರ್ನಾಟಕಕ್ಕೆ ₹81791 ಕೋಟಿ ಪಾಲನ್ನಷ್ಟೇ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ 10 ವರ್ಷಗಳ ಅವಧಿಯಲ್ಲಿ ಒಟ್ಟು ₹2.95 ಲಕ್ಷ ಕೋಟಿ ತೆರಿಗೆ ಪಾಲು ನೀಡಿದ್ದೇವೆ. ಕರ್ನಾಟಕಕ್ಕೆ ಯುಪಿಎ ನೀಡಿದ್ದಕ್ಕಿಂತ ನಾವೇ ಹೆಚ್ಚು ನೀಡಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ‘ಯುಪಿಎ ಅವಧಿಯಲ್ಲಿ ತೆರಿಗೆ ಪಾಲು ದೊರೆತದ್ದು ವಾರ್ಷಿಕ ಸರಾಸರಿ ₹8179 ಕೋಟಿ ಮಾತ್ರ. ಆದರೆ ನಾವು 2024–25ನೇ ಆರ್ಥಿಕ ವರ್ಷ ಒಂದರಲ್ಲೇ ₹45485 ಕೋಟಿ ನೀಡಿದ್ದೇವೆ. ಇನ್ನು ಯುಪಿಎ ಸರ್ಕಾರವು ಅನುದಾನದ ರೂಪದಲ್ಲಿ ರಾಜ್ಯಕ್ಕೆ ನೀಡಿದ್ದು ₹60779 ಕೋಟಿ ಮಾತ್ರ. ನಮ್ಮ ಸರ್ಕಾರದ ಅವಧಿಯ 10 ವರ್ಷಗಳಲ್ಲಿ ಒಟ್ಟು ₹2.36 ಲಕ್ಷ ಕೋಟಿ ನೀಡಿದ್ದೇವೆ’ ಎಂದರು.
‘ಅಪ್ರೆಂಟಿಸ್‌ಶಿಪ್ ಯೋಜನೆ ವಿಪಕ್ಷಗಳ ನಕಲು..
’ ಈ ಬಜೆಟ್ ವಿರೋಧ ಪಕ್ಷಗಳ ಪ್ರಣಾಳಿಕೆಯ ನಕಲು ಎಂಬ ಆರೋಪವನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ‘ಯುವಜನರಿಗೆ ಅಪ್ರೆಂಟಿಸ್‌ಶಿಪ್ ನೀಡುವ ಯೋಜನೆ ವಿಚಾರದಲ್ಲಿ ಅದನ್ನು ಒಪ್ಪುತ್ತೇನೆ. ಅವರ ಪ್ರಣಾಳಿಕೆ ಅಪ್ರೆಂಟಿಸ್‌ಶಿಪ್ ನೀಡಲಷ್ಟೇ ಯೋಜನೆ ಸೀಮಿತವಾಗಿತ್ತು. ಉದ್ಯೋಗ ನೀಡುತ್ತೇವೆ ಎಂದು ಕಾಂಗ್ರೆಸ್ ಎಲ್ಲಿಯೂ ಹೇಳಿಲ್ಲ. ಆದರೆ ನಾವು ಉದ್ಯೋಗವನ್ನೂ ನೀಡುತ್ತೇವೆ’ ಎಂದರು. ‘ಅಲ್ಲಲ್ಲಿ ಹಣ ಚೆಲ್ಲಿದರೆ ಸಾಕು ಅಭಿವೃದ್ಧಿಯಾಗುತ್ತದೆ ಎಂಬುದು ವಿರೋಧ ಪಕ್ಷಗಳ ನಿಲುವು. ನಾವು ಕೌಶಲ ಅಭಿವೃದ್ಧಿಗೆ ಉದ್ಯಮಶೀಲತೆ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿಗೂ ಒತ್ತು ನೀಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.