ADVERTISEMENT

‘ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿಲ್ಲ: ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 16:18 IST
Last Updated 3 ಅಕ್ಟೋಬರ್ 2023, 16:18 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಬೆಂಗಳೂರು: ‘ಲಿಂಗಾಯತ ಅಧಿಕಾರಿಗಳಿಗೆ ಸಿದ್ದರಾಮಯ್ಯನವರ ಸರ್ಕಾರ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈಗಿನ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿ ಪಾಡಾಗಿದೆ’ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಸುಳ್ಳು ಎಂದು ಸಾಬೀತುಪಡಿಸಲು ಜಿಲ್ಲಾಧಿಕಾರಿ ಸೇರಿದಂತೆ ಇತರ ಹುದ್ದೆಗಳಲ್ಲಿರುವ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆ ಮಾಡಿದರು.

‘ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಜಾತಿ, ಪ್ರಾದೇಶಿಕತೆ ಆಧರಿಸಿ ಸಚಿವರನ್ನು ನೇಮಿಸಲಾಗಿದೆ. ಅದು ಅನಿವಾರ್ಯ ಕೂಡ. ಸಚಿವರಾಗಲು ಶಾಸಕರಾಗಿದ್ದರೆ ಸಾಕು. ಯಾವುದೇ ಅರ್ಹತೆ ಬೇಡ. ಆದರೆ, ಅಧಿಕಾರಿಗಳನ್ನು ಜಾತಿ ಆಧಾರದಲ್ಲಿ ನೇಮಿಸಲು ಮುಂದಾದರೆ ಅನರ್ಹರು ಆಯಕಟ್ಟಿನ ಜಾಗಕ್ಕೆ ಬಂದು ಕುಳಿತುಕೊಳ್ಳಬಹುದು. ಅದನ್ನು ಎಲ್ಲರೂ ತಿಳಿದುಕೊಳ್ಳಬೇಕು’ ಎಂದರು.

ADVERTISEMENT

ರಾಜ್ಯದಲ್ಲಿ ಒಬ್ಬ ಲಿಂಗಾಯತ ಐಎಎಸ್ ಅಧಿಕಾರಿಯೂ ಜಿಲ್ಲಾಧಿಕಾರಿಯಾಗಿ ನೇಮಕವಾಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಮೂವರು ಜಿಲ್ಲಾಧಿಕಾರಿಗಳು ಲಿಂಗಾಯತರಿದ್ದಾರೆ. ಏಳು ಮಂದಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ನಾಲ್ವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ 13 ಮಂದಿ ಕುಲಪತಿಗಳು ಲಿಂಗಾಯತರು. ಹೀಗಿರುವಾಗ ಉನ್ನತ ಹುದ್ದೆಯಲ್ಲಿ ಲಿಂಗಾಯತರಿಲ್ಲ ಎನ್ನುವುದು ಸರಿಯಲ್ಲ.  ಮಾಹಿತಿ ಕೊರತೆಯಿಂದ ಶಾಮನೂರು ಶಿವಶಂಕರಪ್ಪ ಅವರು ಹೀಗೆ ಹೇಳಿರಬಹುದು’ ಎಂದು ಹೇಳಿದರು.

ಲಿಂಗಾಯತರಿಗೆ ಆದ್ಯತೆ: ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಹುದ್ದೆಯ 108 ಅಧಿಕಾರಿಗಳಿದ್ದಾರೆ. ಅವರ ಪೈಕಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದವರು 28, ಒಬಿಸಿಯ 17, ಲಿಂಗಾಯತ 14 (ಈ ಪೈಕಿ ಮೂವರು ಜಿಲ್ಲಾಧಿಕಾರಿಗಳು), ಒಕ್ಕಲಿಗ 15, ಕುರುಬ ಸಮುದಾಯದ ಎಂಟು ಅಧಿಕಾರಿಗಳಿದ್ದಾರೆ. ಅಲ್ಲದೆ, ರಜಪೂತ, ಮರಾಠ, ಜೈನ, ಬ್ರಾಹ್ಮಣ ಸೇರಿದಂತೆ ಇತರೆ ಜಾತಿಗಳ 26 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ರಾಯರಡ್ಡಿ ಮಾಹಿತಿ ನೀಡಿದರು. 

ರಾಯರಡ್ಡಿ ಪಟ್ಟಿಯ ‘ಜಾತಿ’ ಲೆಕ್ಕಾಚಾರ ಜಿಲ್ಲಾಧಿಕಾರಿಗಳು

ಲಿಂಗಾಯತ: 03

ಒಕ್ಕಲಿಗ: 06

ಕುರುಬ: 02

ಎಸ್‌ಸಿ/ಎಸ್‌ಟಿ: 07

ಒಬಿಸಿ: 04

ಇತರೆ: 09

ಒಟ್ಟು:31

ಜಿಲ್ಲಾ ಪಂಚಾಯಿತಿ ಸಿಇಒಗಳು

ಲಿಂಗಾಯತ:4

ಒಕ್ಕಲಿಗ:3

ಕುರುಬ:1

ಎಸ್‌ಸಿ/ಎಸ್‌ಟಿ:10

ಒಬಿಸಿ:4

ಇತರೆ:9

ಒಟ್ಟು:31

ಪೊಲೀಸ್ ವರಿಷ್ಠಾಧಿಕಾರಿ ವೃಂದ

ಲಿಂಗಾಯತ:07

ಒಕ್ಕಲಿಗ:06

ಕುರುಬ:5

ಎಸ್‌ಸಿ/ಎಸ್‌ಟಿ:11

ಒಬಿಸಿ:9

ಇತರೆ:8

ಒಟ್ಟು: 46

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.