ADVERTISEMENT

ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಇಲ್ಲ: ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:23 IST
Last Updated 24 ಜುಲೈ 2024, 14:23 IST
   

ನವದೆಹಲಿ: ಕರ್ನಾಟಕದ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. 

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. 

‘2014–15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆ ವಿಭಾಗ ಸ್ಥಾಪನೆಗೆ ಅನುಮೋದನೆ ನೀಡಿರಲಿಲ್ಲ. ವಿಭಾಗ ಸ್ಥಾ‍ಪನೆಯ ಕಾರ್ಯಸಾಧ್ಯತೆಯ ಪರಿಶೀಲಿಸಲು ಮೂವರು ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿತ್ತು. ಕಾರ್ಯಾಚರಣೆ, ಹಣಕಾಸು, ಆಡಳಿತಾತ್ಮಕ ಮತ್ತಿತರ ವಿಷಯಗಳನ್ನು ಈ ಸಮಿತಿ ಪರಿಶೀಲನೆ ನಡೆಸಿ ಈ ಸಮಿತಿ ವರದಿ ನೀಡಿತ್ತು. ರೈಲ್ವೆ ವಿಭಾಗದ ಅಗತ್ಯ ಇಲ್ಲ ಎಂದು ವರದಿ ಸಲ್ಲಿಸಿತ್ತು. ಹಾಗಾಗಿ, ಈ ಪ್ರಸ್ತಾವ ಕೈಬಿಡಲಾಗಿತ್ತು ಎಂದು ಅವರು ವಿವರ ನೀಡಿದರು. 

ADVERTISEMENT

ರಾಧಾಕೃಷ್ಣ, ‘ವಿಭಾಗ ಸ್ಥಾಪನೆಗೆ ಅಗತ್ಯ ಜಮೀನು ಇದೆ. ಹಲವು ಸಲ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ತುರ್ತಾಗಿ ವಿಭಾಗ ಸ್ಥಾಪನೆಯಾಗಬೇಕಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು. 

ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ‘ಚಿಕ್ಕಬಳ್ಳಾಪುರ–ಗೌರಿಬಿದನೂರು (44 ಕಿ.ಮೀ) ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಂತಿಮ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದರು. 

ಚಿಕ್ಕಬಳ್ಳಾಪುರ–ಪುಟ್ಟಪರ್ತಿ (104 ಕಿ.ಮೀ) ನಡುವೆ ಹೊಸ ಮಾರ್ಗ ನಿರ್ಮಾಣಕ್ಕೆ ಸರ್ವೆ ಪೂರ್ಣಗೊಂಡಿದೆ. ಶ್ರೀನಿವಾಸಪುರ–ಮದನಪಲ್ಲಿ (75 ಕಿ.ಮೀ) ಹೊಸ ಮಾರ್ಗಕ್ಕಾಗಿ ಸರ್ವೆ ನಡೆಸಲಾಗಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಕಾರಣಕ್ಕೆ ಈ ಎರಡು ಯೋಜನೆಗಳನ್ನು ಕಾರ್ಯಗತಗೊಳಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. 

ಮಾರಿಕುಪ್ಪಂ–ಕುಪ್ಪಂ (24 ಕಿ.ಮೀ) ನಡುವೆ ₹279 ಕೋಟಿ ವೆಚ್ಚದಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ 2013ರಲ್ಲಿ ಅನುಮೋದನೆ ನೀಡಲಾಗಿತ್ತು. ಈ ಯೋಜನೆಗೆ 320 ಎಕರೆ (ಕರ್ನಾಟಕದಲ್ಲಿ 70 ಎಕರೆ, ಆಂಧ್ರ ಪ್ರದೇಶದಲ್ಲಿ 250 ಎಕರೆ) ಜಾಗ ಬೇಕಿದೆ. ಆಂಧ್ರ ಸರ್ಕಾರವು 70 ಎಕರೆ ಜಾಗವನ್ನು ಇನ್ನೂ ಹಸ್ತಾಂತರಿಸಿಲ್ಲ. ಭೂಮಿಯ ಲಭ್ಯತೆ ನೋಡಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.